ಭಾರತೀಯ ಅಯ್ಯಪ್ಪ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ತುಕಾರಾಮ ಬಿ. ಚಿತ್ತಾಪೂರ ನೇಮಕ
ಭಾರತೀಯ ಅಯ್ಯಪ್ಪ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ತುಕಾರಾಮ ಬಿ. ಚಿತ್ತಾಪೂರ ನೇಮಕ
ಕಲಬುರಗಿ: ಅಯ್ಯಪ್ಪ ಸ್ವಾಮಿಯ ಭಕ್ತಿಯಲ್ಲಿ ಶ್ರದ್ಧೆ, ಸಂಯಮದ ಜತೆಗೆ ಸಮಾಜ ಸೇವೆಯ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಗೌರವಾಧ್ಯಕ್ಷ ಮೋಹನ್ ಗುರುಸ್ವಾಮಿ ಕರೆ ನೀಡಿದರು.
ನಗರದ ಪೂಜಾ ಕಾಲೋನಿಯಲ್ಲಿರುವ ಸಂತೋಷ ಎಸ್. ಗುತ್ತೇದಾರ ಅವರ ನಿವಾಸದಲ್ಲಿ ಭಾರತೀಯ ಅಯ್ಯಪ್ಪ ಸೇವಾ ಸಂಘದ ಕಲಬುರಗಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೇವಾ ಸಮಾವೇಶ ನಡೆಯಿತು.
ಮಹಾಲಕ್ಷ್ಮಿ ಶಕ್ತಿಪೀಠ ಸರಡಗಿಯ ಪೂಜ್ಯ ಶ್ರೀ ಡಾ. ಅಪ್ಪಾರಾವ್ ದೇವಿ ಮುತ್ಯಾ ಅವರು ದಿವ್ಯ ಸಾನಿಧ್ಯ ವಹಿಸಿ ಅಯ್ಯಪ್ಪ ಸ್ವಾಮಿಯ ಚರಿತ್ರೆ, ಪೂಜಾ ವಿಧಿ-ವಿಧಾನಗಳು ಹಾಗೂ ಲೀಲೆಗಳ ಕುರಿತು ಭಕ್ತರಿಗೆ ವಿವರಿಸಿದರು. ಭಕ್ತಿಯಲ್ಲಿ ಶ್ರದ್ಧೆ, ಸಂಯಮ ಮತ್ತು ಸೇವಾ ಮನೋಭಾವದ ಮಹತ್ವವನ್ನು ತಿಳಿಸಿದರು.
ಮೋಹನ್ ಗುರುಸ್ವಾಮಿ ಅವರು ಮಾಲಾಧಾರಿಗಳು ಹಾಗೂ ಭಕ್ತರಿಗೆ ಗುರುಪದೇಶ ನೀಡಿ, ಅಯ್ಯಪ್ಪ ಸ್ವಾಮಿಯ ಆರಾಧನೆಯೊಂದಿಗೆ ಸಮಾಜ ಸೇವೆಗೂ ಆದ್ಯತೆ ನೀಡಬೇಕು ಎಂದರು.
ಸAಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರು ಉಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಯ್ಯಪ್ಪ ಸ್ವಾಮಿಯ ಆರಾಧನೆಯಲ್ಲಿ ಸಮಾನತೆ ಮತ್ತು ಜಾತ್ಯತೀತತೆಗೆ ಮಹತ್ವವಿದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು. ಮಾಲಾಧಾರಿಗಳ ವ್ರತಾಚರಣೆ ಹಾಗೂ ಪೂಜಾ ವಿಧಿ-ವಿಧಾನಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದು ಹೇಳಿದರು. ಭಕ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತವಾಗಿ ಸ್ಪಂದಿಸುವ ಅಗತ್ಯವಿದೆ ಎಂದರು.
ರಾಷ್ಟ್ರೀಯ ಕಾರ್ಯದರ್ಶಿ ಶಿವಾನಂದ ಬಾರಕಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿಬೆಳಗಾವಿ-ವಿಜಯಪುರ ಮಾರ್ಗದಿಂದ ಶಬರಿಮಲೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ಸಂಘ ಹೋರಾಟ ನಡೆಸಿದೆ. ಸಿಲಿಂಡರ್ ಸ್ಫೋಟದ ದುರಂತದಲ್ಲಿ ಸಂಘದ ಎಂಟು ಮಂದಿ ಮೃತಪಟ್ಟ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ತಲಾ ?೪೦ ಸಾವಿರ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಕಾರಾಮ ಬಿ. ಚಿತ್ತಾಪೂರ ಅವರನ್ನು ಭಾರತೀಯ ಅಯ್ಯಪ್ಪ ಸೇವಾ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಬಸ್ಸಯ್ಯ ಸಾಲಿಮಠ್ ಅವರನ್ನು ಜಿಲ್ಲಾ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ವಿಜಯಪುರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ರಾಮಚಂದ್ರ ಕರಾಂಡೆ, ರಾಣೆಬೆನ್ನೂರು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟಿ ಮಂಜುನಾಥ್ ಮಣೇಗಾರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ನೇವನೂರು, ಟ್ರಸ್ಟಿ ಬಸವರಾಜ್ ಶೇರಿಕರ್, ಶಬರಿ ಸಂಕಲ್ಪ ಸನ್ನಿಧಾನದ ಗುರುಸ್ವಾಮಿ ತುಕಾರಾಮ ಬಿ. ಚಿತ್ತಾಪುರ, ಉಪಾಧ್ಯಕ್ಷರಾದ ಸಂತೋಷ ಶೆಟ್ಟಿ, ಲಕ್ಷ್ಮೀಕಾಂತ್ ಭಾಸಗಿ, ಶರಣು ಬಿರಾದಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್ ತುಪ್ಪದ, ರಾಜ್ಯ ಖಜಾಂಚಿ ರವಿ ಡಾಂಗೆ, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ರವಿ ಬೆಳಗಾವಿ, ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಕಾಂತ್ ಕುಂದನಗಾರ್, ಚನ್ನಬಸು ಗುರುಸ್ವಾಮಿ, ಅನೂಪ್ ಉಪರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಖಜಾಂಚಿ ಕಲ್ಲಪ್ಪ ಯಾದವ, ಅಣವೀರ ಪಾಟೀಲ್ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಬರಿ ಸಂಕಲ್ಪ ಸನ್ನಿಧಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮೋಹನ್ ಗುರುಸ್ವಾಮಿ ಅವರಿಂದ ಪಡಿಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಅಭಿಷೇಕ ಪಟ್ಟರೆಡ್ಡಿ ನಿರ್ವಹಿಸಿದರು. ಡಿ.ಕೆ. ಗುರುಸ್ವಾಮಿ ವಂದನಾರ್ಪಣೆ ನೆರವೇರಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗುರುಸ್ವಾಮಿಗಳು, ಮಾಲಾಧಾರಿಗಳು, ಅಯ್ಯಪ್ಪ ಭಕ್ತರು ಹಾಗೂ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

