ವಾರದೊಳಗೆ ಔರಾದ, ಕಮಲನಗರವನ್ನು ಬರಪೀಡಿತವೆಂದು ಘೋಷಿಸಿ:ಸರ್ಕಾರಕ್ಕೆ ಶಾಸಕ ಪ್ರಭು ಚವ್ಹಾಣ ಖಡಕ್ ಎಚ್ಚರಿಕೆ

ವಾರದೊಳಗೆ ಔರಾದ, ಕಮಲನಗರವನ್ನು ಬರಪೀಡಿತವೆಂದು ಘೋಷಿಸಿ: ಇಲ್ಲವಾದರೆ ಬೃಹತ್ ಹೋರಾಟ

ರಾಜ್ಯ ಸರ್ಕಾರಕ್ಕೆ ಶಾಸಕ ಪ್ರಭು ಚವ್ಹಾಣ ಖಡಕ್ ಎಚ್ಚರಿಕೆ

-ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎರಡನೇ ಹಂತದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲೂ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಸೇರಿಸದೆ ಮತ್ತೊಮ್ಮೆ ಕಡೆಗಣಿಸಿರುವುದಕ್ಕೆ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ತೀವ್ರ ಆಕ್ರೋಶ ಹಾಗೂ ಬೇಸರ ಹೊರ ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಬಹುತೇಕ ರೈತರು ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಪ್ರಸಕ್ತ ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಸಂಪೂರ್ಣವಾಗಿ ಒಣಗಿ ನಿಂತಿವೆ. ಆರಂಭದಲ್ಲೇ ಮಳೆ ವಿಳಂಬವಾಗಿದ್ದರಿಂದ ಬಿತ್ತನೆ ತಡವಾಯಿತು. ನಂತರವೂ ಸಮರ್ಪಕ ಮಳೆಯಾಗದೆ ರೈತರು ಒಂದೇ ಬೆಳೆಗೆ ಎರಡು-ಮೂರು ಬಾರಿ ಬಿತ್ತನೆ ಮಾಡಿ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಹಣವನ್ನು ಮಣ್ಣಿನಲ್ಲಿ ಸುರಿದಿದ್ದಾರೆ. ಇದೀಗ ಬೆಳೆ ಕೈಕೊಟ್ಟಿರುವುದರಿಂದ ರೈತರು ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದ್ದಾರೆ.

ಈ ವಾಸ್ತವ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲು ಪದೇ ಪದೇ ಪತ್ರಗಳನ್ನು ಬರೆದು ಮನವಿ ಮಾಡಿದ್ದೇನೆ. ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೂ ರೈತರ ನೋವಿಗೆ ಸ್ಪಂದಿಸದೆ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿರುವುದು ಅತ್ಯಂತ ಖಂಡನೀಯ.

ಮೂರು ವಾರಗಳ ಕಾಲ ಮಳೆಯಾಗದಿದ್ದರೆ ಬರಪೀಡಿತ ಪ್ರದೇಶವೆಂದು ಘೋಷಿಸುವ ಮಾನದಂಡ ಅನ್ವಯವಾಗುತ್ತದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಎಂ.ಎಸ್. ದಿವಾಕರ್ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ತಿಳಿಸಿದ್ದರು. ಆದರೆ ಮಾನದಂಡದ ಪ್ರಕಾರ ಪರಿಸ್ಥಿತಿ ಗಂಭೀರವಾಗಿದ್ದರೂ, ಔರಾದ ಹಾಗೂ ಕಮಲನಗರವನ್ನು ಪಟ್ಟಿಯಿಂದ ಹೊರಗಿಟ್ಟಿರುವುದರ ಹಿಂದಿನ ಕಾರಣವೇನು? ರೈತರಿಗೆ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೇ ಸರ್ಕಾರ ಈ ರೀತಿಯ ಕಣ್ಣಾಮುಚ್ಚಾಲೆ ಆಟವಾಡುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ನೆಪಗಳು, ಅಧಿಕಾರಿಗಳ ವರದಿಗಳು ಹಾಗೂ ಕಾಗದದ ಅಂಕಿ-ಅಂಶಗಳ ಹಿಂದೆ ಬಚ್ಚಿಟ್ಟುಕೊಂಡು ರೈತರಿಗೆ ಅನ್ಯಾಯ ಮಾಡುವುದನ್ನು ಇನ್ನು ಸಹಿಸುವುದಿಲ್ಲ. ರಾಜ್ಯ ಸರ್ಕಾರಕ್ಕೆ ಇನ್ನು ಕೇವಲ ಒಂದು ವಾರದ ಗಡುವು ನೀಡುತ್ತೇನೆ. ಒಂದು ವಾರದೊಳಗೆ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ, ಅರ್ಹ ರೈತರಿಗೆ ತಕ್ಷಣ ಪರಿಹಾರ ನೀಡಬೇಕು.

ಇಲ್ಲದಿದ್ದರೆ ಬಿಜೆಪಿ ರೈತರೊಂದಿಗೆ ಬೀದಿಗಿಳಿಯಲಿದೆ. ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಮತ್ತು ಬೀದರ- ಔರಾದ ಹಾಗೂ ಬೀದರ–ಕಮಲನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದು ಕೇವಲ ಎಚ್ಚರಿಕೆ ಅಲ್ಲ; ರೈತರ ಹಕ್ಕಿಗಾಗಿ ಕೈಗೊಳ್ಳಲಿರುವ ಹೋರಾಟದ ಘೋಷಣೆ. ರೈತರ ತಾಳ್ಮೆಯನ್ನು ಸರ್ಕಾರ ದೌರ್ಬಲ್ಯವೆಂದು ಭಾವಿಸಬಾರದು. ಔರಾದ ಹಾಗೂ ಕಮಲನಗರ ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಶಾಸಕರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.