ಪಾಟೀಲ್ ಕುಟುಂಬದ ಬೆಂಬಲಿಗರ 35 ವರ್ಷದ ಸಂಬಂಧಕ್ಕೆ ತೆರೆ: 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಪಾಟೀಲ್ ಕುಟುಂಬದ ಬೆಂಬಲಿಗರ 35 ವರ್ಷದ ಸಂಬಂಧಕ್ಕೆ ತೆರೆ: 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಪಾಟೀಲ್ ಕುಟುಂಬದ ಬೆಂಬಲಿಗರ 35 ವರ್ಷದ ಸಂಬಂಧಕ್ಕೆ ತೆರೆ: 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಅಫಜಲಪುರ: ತಾಲೂಕಿನ ಗೊಬ್ಬೂರ, ಹಾವನೂರ, ಅವರಳ್ಳಿ ಹಾಗೂ ಬಾದನಳ್ಳಿ ಗ್ರಾಮದ 150ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಗೊಬ್ಬೂರ ಗ್ರಾಮದ ಬಸಲಿಂಗಪ್ಪ ದೇವತ್ಕಲ್, ಶೀವು ಬಾದನಳ್ಳಿ, ಪ್ರವೀಣ್ ದೇವತ್ಕಲ್, ಶಂಕರೇಪ್ಪ, ಯಮನಪ್ಪ ಗವಾಯಿ, ಮಲ್ಲು, ಶಿವಾನಂದ ತಳವಾರ, ಮಹಾಂತೇಶ, ಈರಣ್ಣ ಪೂಜಾರಿ, ಶಿವಪ್ಪ ಪೂಜಾರಿ, ಮಲ್ಲಣ್ಣ ನಂದಿ, ಕುಮಾರ ಕೋಳಿಗೇರಿ ಸೇರಿದಂತೆ 150ಕ್ಕೂ ಹೆಚ್ಚು ಜನರು ಬಿಜೆಪಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ನಿತಿನ್ ಗುತ್ತೇದಾರ್, “35 ವರ್ಷಕ್ಕೂ ಹೆಚ್ಚು ಕಾಲ ಪಾಟೀಲ್ ಕುಟುಂಬದೊಂದಿಗೆ ಇದ್ದ ಸಂಬಂಧವನ್ನು ಬಿಟ್ಟು ಇಂದು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾನು ಅಫಜಲಪುರ ತಾಲೂಕಿನ ಮನೆಯ ಮಗ. ನನ್ನನ್ನು ಕೇವಲ ರಾಜಕಾರಣಿಯಾಗಿ ನೋಡಬೇಡಿ; ನಿಮ್ಮೆಲ್ಲರ ಸೇವಕ ಎಂದು ಭಾವಿಸಿ. ನಿಮ್ಮ ಸುಖ-ದುಃಖಗಳಲ್ಲಿ ಭಾಗಿಯಾಗುತ್ತೇನೆ” ಎಂದು ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೊಬ್ಬೂರ ಗ್ರಾಮಕ್ಕೆ 500 ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅವುಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಹೋರಾಟ ನಡೆಸಿ ಬಡವರಿಗೆ ಮನೆಗಳನ್ನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಅಫಜಲಪುರ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸುವಂತೆ ಜಿಲ್ಲೆಯಲ್ಲಿ ನಡೆಸಿದ ಪ್ರತಿಭಟನೆಯ ಫಲವಾಗಿ ಬರಗಾಲ ಘೋಷಣೆಯಾಗಿದೆ ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಲಿಂಗಪ್ಪ ದೇವತ್ಕಲ್ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಬಡಜನರ ಕೆಲಸಗಳು ಆಗುತ್ತಿಲ್ಲ. ನಮ್ಮ ತಂದೆಯ ಕಾಲದಿಂದಲೂ ಎಂ.ವೈ.ಪಾಟೀಲ್ ಅವರ ಬೆಂಬಲಿಗರಾಗಿ ಕೆಲಸ ಮಾಡಿದ್ದೇವೆ. ಆದರೆ ನಿರಂತರವಾಗಿ ಕಡೆಗಣನೆ ಮಾಡುತ್ತಿರುವುದರಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇವೆ” ಎಂದರು. ಗೊಬ್ಬೂರ ಗ್ರಾಮಕ್ಕೆ ಬಂದಿರುವ 500 ಮನೆಗಳನ್ನು ಶಾಸಕರು ತಡೆಹಿಡಿದಿದ್ದು, ಬಡಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದಲಿತ ಮುಖಂಡ ಶೀವು ಬಾದನಳ್ಳಿ ಮಾತನಾಡಿ, ಶಾಸಕ ಎಂ.ವೈ.ಪಾಟೀಲ್ ಅವರ ಪುತ್ರ ಅರುಣಕುಮಾರ ಪಾಟೀಲ್ ಅವರ ಆಡಳಿತದಿಂದ ಬೇಸತ್ತು ಬಿಜೆಪಿ ಸೇರ್ಪಡೆಯಾಗಿರುವುದಾಗಿ ತಿಳಿಸಿದರು. 2014ರಿಂದ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೂ ದಲಿತ ಸಮುದಾಯಕ್ಕೆ ನಿರಂತರ ಅನ್ಯಾಯವಾಗಿದೆ. ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಲ್ಲ. ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲು ಪಕ್ಷ ಸಂಘಟನೆಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅಫಜಲಪುರ ತಾಲೂಕಿನಲ್ಲಿ ಸಮರ್ಪಕವಾಗಿ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತಿಲ್ಲ. ಬರಗಾಲ ಘೋಷಣೆಯನ್ನೂ ಕಾಟಾಚಾರಕ್ಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ಪರಿಸ್ಥಿತಿಯ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಶಾಸಕರು ಬರಗಾಲದ ವಿಚಾರದಲ್ಲಿ ಸರ್ಕಾರದ ಮುಂದೆ ಬಲವಾದ ಧ್ವನಿ ಎತ್ತಬೇಕು ಎಂದು ಒತ್ತಾಯಿಸಲಾಯಿತು. ತಂದೆ-ಮಗನ ‘ಸೂಪರ್ ಪವರ್’ನಿಂದ ತಾಲೂಕಿನ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.