ಕ ಸಾ ಪ ಅಧ್ಯಕ್ಷಗಿರಿಗೆ ಸ್ಪರ್ಧಾಕಾಂಕ್ಷಿ ಡಾ. ಸಿ. ಸೋಮಶೇಖರ್ ಮನವಿ

ಕ ಸಾ ಪ  ಅಧ್ಯಕ್ಷಗಿರಿಗೆ ಸ್ಪರ್ಧಾಕಾಂಕ್ಷಿ ಡಾ. ಸಿ. ಸೋಮಶೇಖರ್ ಮನವಿ

ಕನ್ನಡಮ್ಮನ ಗುಡಿಸೇವೆ ನುಡಿ ಸೇವೆಗಾಗಿ ಸ್ಪರ್ಧೆ

ಕ ಸಾ ಪ ಅಧ್ಯಕ್ಷಗಿರಿಗೆ ಸ್ಪರ್ಧಾಕಾಂಕ್ಷಿ ಡಾ. ಸಿ. ಸೋಮಶೇಖರ್ ಮನವಿ

 ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತಿನ ಗತವೈಭವವನ್ನು ಮರಳಿ ಸ್ಥಾಪಿಸಲು ಕನ್ನಡಮ್ಮನ ಗುಡಿಸೇವೆ ಮತ್ತು ನುಡಿ ಸೇವೆಗಾಗಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಹೇಳಿದರು.

   ಕಲಬುರಗಿಯಲ್ಲಿ ಮಂಗಳವಾರ ಸೆ. 9 ರಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಅದು ಅಧಿಕಾರವಲ್ಲ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದಗಳ ರಕ್ಷಣೆ ಪ್ರಸಾರ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿ ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಪರಿಕಲ್ಪನೆಯ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸಿ ಅವುಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಬೇಕು ಎಂಬ ಹಂಬಲದಿಂದ ಸ್ಪರ್ಧಾ ಕಣಕ್ಕೆ ಇಳಿಯುತ್ತಿದ್ದೇನೆ ಎಂದರು . ವಿದ್ಯಾರ್ಥಿ ದೆಸೆಯಿಂದಲೂ ಅಪ್ಪಟ ಕನ್ನಡಾಭಿಮಾನಿಯಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಐಎಎಸ್ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಉತ್ತರಿಸಿ ಕೇಂದ್ರ ಪ್ರಥಮ ದರ್ಜೆ ಸೇವೆಗೆ ಆಯ್ಕೆಯಾದ ನಂತರ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಇಚ್ಛೆಯಿಂದ ಕರ್ನಾಟಕ ಆಡಳಿತ ಸೇವೆಯನ್ನು ಆಯ್ಕೆ ಮಾಡಿಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ, ತುಮಕೂರು ಜಿಲ್ಲಾಧಿಕಾರಿಯಾಗಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಿ ಇರುವಂತೆ ಪ್ರಯತ್ನಿಸಿ ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕನ್ನಡಿಗರ ಮುಂದೆ ಸೇವಾಕಾಂಕ್ಷಿಯಾಗಿ ಕಣಕ್ಕಿಳಿದಿದ್ದೇನೆ ಎಂದರು.  

    ಕನ್ನಡ ಸಾಹಿತ್ಯ ಪರಿಷತ್ 125 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ಇದರ ಮತದಾರರ ಪಟ್ಟಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತದಾರರಿದ್ದರೂ ಶೇ.15 ರಿಂದ 20 ರಷ್ಟು ಮತದಾರರು ವರ್ಗಾವಣೆ ಹಾಗೂ ಕೀರ್ತಿಶೇಷರಾಗಿದ್ದಾರೆ. ಪರಿಷತ್ ಗೆ ಸುಮಾರು ಒಂದು ಕೋಟಿ ಸದಸ್ಯರನ್ನು ಸೇರ್ಪಡೆಗೊಳಿಸಿ ಸಾಹಿತ್ಯ ಸಂಸ್ಕೃತಿಯ ನಿತ್ಯೋತ್ಸವದ ಜೊತೆಗೆ ಯುವಕರನ್ನು ಮತ್ತು ಮಕ್ಕಳನ್ನು ಪರಿಷತ್ತಿನ ಚಟುವಟಿಕೆಗಳಲ್ಲಿ ಸೇರ್ಪಡೆಗೊಳಿಸುವ ಹಾಗೂ ಗಡಿ ಭಾಗಗಳಲ್ಲಿ ಕನ್ನಡದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ಒಟ್ಟು ಸುಮಾರು 21 ಬೇಡಿಕೆಗಳ ಪ್ರಣಾಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಕನ್ನಡದ ಸಾಮಾನ್ಯ ಪರಿಚಾರಕನಾಗಿ ಸಾಹಿತ್ಯ ಪರಿಷತ್ತಿಗೆ ಅಂಟಿದ ಕಳಂಕವನ್ನು ತೊಡೆದು ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಆಡಳಿತ ಸೇವೆಯಲ್ಲಿದ್ದವರು ಎಲ್ಲರೂ ಸಮರ್ಥರೂ ಅಲ್ಲ ಜೊತೆಗೆ ಅಸಮರ್ಥರೂ ಅಲ್ಲ. ಆದುದರಿಂದ ಆಡಳಿತ ಅಧಿಕಾರಿಗಳು ಚುನಾವಣೆಗೆ ಸ್ಪರ್ಧಿಸುವುದರಲ್ಲಿ ತಪ್ಪಿಲ್ಲ. ಸಂಸ್ಕೃತಿ ಮತ್ತು ಪ್ರಗತಿ ಆಡಳಿತ ನಾಣ್ಯದ ಎರಡು ಮುಖಗಳೆಂದೆ ಭಾವಿಸಿರುವ ಈ ಸಂದರ್ಭದಲ್ಲಿ ಆಡಳಿತಕ್ಕೆ ಮಾನವೀಯ ಸ್ಪರ್ಶವನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಸೋಮಶೇಖರ್ ಸ್ಪಷ್ಟ ಪಡಿಸಿದರು.

   ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಅಪ್ಪಾ ರಾವ್ ಅಕ್ಕೋಣಿ,ಡಾ. ಶಬ್ದ ಬಸವಪ್ಪ ವಡ್ಡನಕೇರಿ,

ಡಾ.ಮಲ್ಲಿಕಾರ್ಜುನ ವಡ್ಡನಕೇರಿ ಶಿವಲಿಂಗಪ್ಪ, ಬಸವರಾಜ್ ಮೊರಬದ, ಪ್ರಭುಲಿಂಗ ಗೊಬ್ಬೂರ,ಡಾ. ಗಣಪತಿ ಸಿಂಧೆ, ಶಾಂತಲಿಂಗ ಪಾಟೀಲ್, ಕೋಳಕೂರ, ರಾಜಕುಮಾರ ಜೈನ್, ಮಂಜುನಾಥ ನಾಲವಾರಕಾರ್, ಸಚಿನ್ ಪರತಾಬಾದ್ ಮತ್ತಿತರರು ಉಪಸ್ಥಿತರಿದ್ದರು.