ಸೆ.17ರ ಬದಲು ಸೆ.18ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ಮನವಿ
ಸೆ.17ರ ಬದಲು ಸೆ.18ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ಮನವಿ
ಕಲಬುರಗಿ, ಸೆ.8: ಕಲ್ಯಾಣ ಕರ್ನಾಟಕ ಪ್ರದೇಶದ ವಿಮೋಚನಾ ದಿನವನ್ನು ಪ್ರಸ್ತುತ ಆಚರಿಸುತ್ತಿರುವ ಸೆಪ್ಟೆಂಬರ್ 17ರ ಬದಲಾಗಿ, ಸೆಪ್ಟೆಂಬರ್ 18ರಂದು ಆಚರಿಸುವಂತೆ ದಿನಾಂಕ ತಿದ್ದುಪಡಿ ಮಾಡಿ ಸರ್ಕಾರದಿಂದ ಹೊಸ ಆದೇಶ ಹೊರಡಿಸಬೇಕು ಎಂದು ಕೆ.ವಾಯ್.ಎಫ್. ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ವಿನೋದಕುಮಾರ ಜೇನವೆರಿ ಅವರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸೆಪ್ಟೆಂಬರ್ 8ರಂದು ಸಲ್ಲಿಸಿರುವ ಮನವಿಯಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ 1995ರಿಂದ ಸೆಪ್ಟೆಂಬರ್ 18ರಂದು ವಿಮೋಚನಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. 2013ರಿಂದ ಕೆ.ವಾಯ್.ಎಫ್. ಸಮಿತಿಯ ವತಿಯಿಂದಲೂ ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು 1998ರಿಂದ ಯಾವುದೇ ಸಮರ್ಪಕ ದಾಖಲೆ ಆಧಾರಗಳಿಲ್ಲದೆ ಸೆಪ್ಟೆಂಬರ್ 17ರಂದು ವಿಮೋಚನಾ ದಿನ ಆಚರಿಸುತ್ತಿದೆ. ಈ ಕುರಿತು ಸರ್ಕಾರಕ್ಕೆ ವಿವಿಧ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಕೀಲರಾಗಿದ್ದ ದಿವಂಗತ ಯಶವಂತರಾವ ಪಾಟೀಲ ರೇವೂರ ಅವರು 2021ರ ಜುಲೈ 2ರಂದು ಸಲ್ಲಿಸಿದ್ದ ಅಧಿಕೃತ ದಾಖಲೆಯನ್ನೂ ಪರಿಗಣಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಪ್ರಾದೇಶಿಕ ಆಯುಕ್ತರು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲಾ ಜಿಲ್ಲಾಧಿಕಾರಿಗಳ ತುರ್ತು ಸಭೆ ಕರೆದು, ಸಭೆಯ ನಿರ್ಣಯಗಳನ್ನು ಸರ್ಕಾರಕ್ಕೆ ಶೀಘ್ರವಾಗಿ ಸಲ್ಲಿಸಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ತಿದ್ದುಪಡಿ ಕುರಿತು ನಿರ್ಧಾರ ಕೈಗೊಂಡು ಹೊಸ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ತಪ್ಪು ದಿನಾಂಕದಲ್ಲಿ ವಿಮೋಚನಾ ದಿನ ಆಚರಿಸುವುದರಿಂದ ಈ ಭಾಗದ ನೈಜ ಇತಿಹಾಸಕ್ಕೆ ಹಾಗೂ ವಿಮೋಚನೆಗಾಗಿ ಹೋರಾಡಿ ಹುತಾತ್ಮರಾದ ಹೋರಾಟಗಾರರಿಗೆ ಅಪಚಾರವಾಗುತ್ತದೆ. ಅಲ್ಲದೆ, ಯುವ ಪೀಳಿಗೆಗೆ ತಪ್ಪು ಇತಿಹಾಸ ತಿಳಿಯುವ ಸಾಧ್ಯತೆ ಇದೆ. ಹೀಗಾಗಿ ಸೆಪ್ಟೆಂಬರ್ 17ರ ಬದಲಾಗಿ ಸೆಪ್ಟೆಂಬರ್ 18ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಆಚರಿಸುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನೋದಕುಮಾರ ಜೇನವೆರಿ ಮನವಿ ಮಾಡಿದ್ದಾರೆ.

