ಜನಸೇವೆಯೇ ಜೀವನದ ಧ್ಯೇಯ – ಸಂಗಮೇಶ ನಾಗನಹಳ್ಳಿ

ಜನಸೇವೆಯೇ ಜೀವನದ ಧ್ಯೇಯ – ಸಂಗಮೇಶ ನಾಗನಹಳ್ಳಿ
ಜನಸೇವೆಯೇ ಜೀವನದ ಧ್ಯೇಯ – ಸಂಗಮೇಶ ನಾಗನಹಳ್ಳಿ

ಜನಸೇವೆಯೇ ಜೀವನದ ಧ್ಯೇಯ – ಸಂಗಮೇಶ ನಾಗನಹಳ್ಳಿ 

ಲೇಖನ: ಶರಣಗೌಡ ಪಾಟೀಲ ಪಾಳಾ

ಕಲಬುರಗಿ ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಜನಸೇವೆಯ ಮೂಲಕ ಗುರುತಿಸಿಕೊಂಡಿರುವ ವ್ಯಕ್ತಿಗಳಲ್ಲಿ ಶ್ರೀ ಸಂಗಮೇಶ ನಾಗನಹಳ್ಳಿ ಅವರ ಹೆಸರು ಪ್ರಮುಖವಾಗಿದೆ. ಕಲಬುರಗಿ ನಗರದ ನಾಗನಹಳ್ಳಿ ಗ್ರಾಮದ ನಿವಾಸಿಗಳಾದ ಅವರು, ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕನಾಗಿ ತಮ್ಮದೇ ಆದ ಗೌರವವನ್ನು ಸಂಪಾದಿಸಿದ್ದಾರೆ.

ಬಾಲ್ಯದಿಂದಲೇ ಸಮಾಜಮುಖಿ ಚಿಂತನೆ ಹೊಂದಿದ್ದ ಸಂಗಮೇಶ ನಾಗನಹಳ್ಳಿ ಅವರು ಆರಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಆದರೆ ಸಾರ್ವಜನಿಕ ಸೇವೆಯ ಮೇಲಿನ ಅಪಾರ ಆಸಕ್ತಿಯಿಂದ ಆ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯ ಮತ್ತು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು. ಜನರ ಮಧ್ಯೆಯೇ ಬದುಕಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವುದು ತಮ್ಮ ಜೀವನದ ಉದ್ದೇಶವೆಂದು ನಂಬಿದ ಅವರು, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಪಕ್ಷದ ಸಂಘಟನೆಗಾಗಿ ನಿಷ್ಠೆಯಿಂದ ದುಡಿದರು.

ಗ್ರಾಮ ಮಟ್ಟದಿಂದ ಆರಂಭವಾದ ಅವರ ರಾಜಕೀಯ ಪಯಣ ಕ್ರಮೇಣ ಜಿಲ್ಲಾಮಟ್ಟದ ನಾಯಕರ ವಿಶ್ವಾಸ ಗಳಿಸುವ ಮಟ್ಟಕ್ಕೆ ಬೆಳೆಯಿತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಾಗೂ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರು ಒಡನಾಟದಲ್ಲಿ ಬೆಳೆದವರು, ಗೃಹಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

  ಇಂದಿನ ಸಚಿವರಾದ ಶರಣಪ್ರಕಾಶ್ ಪಾಟೀಲ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿಯೂ ಇವರು ಕಲಬುರಗಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಿದ ಜನಪ್ರತಿನಿಧಿಯಾಗಿ ಹೆಸರು ಗಳಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರು.

  ಹಲವಾರು ಹಿರಿಯ ನಾಯಕರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು.

ಪಕ್ಷದಲ್ಲಿ ಯಾವುದೇ ಹುದ್ದೆಯ ನಿರೀಕ್ಷೆಯಿಲ್ಲದೆ ನಿಷ್ಠೆಯಿಂದ ದುಡಿದ ಸಂಗಮೇಶ ನಾಗನಹಳ್ಳಿ ಅವರು, ಕಾಲಕ್ರಮೇಣ ಉಂಟಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಕಲಬುರಗಿ ಗ್ರಾಮೀಣ ಕ್ಷೇತ್ರದ ರಾಜಕೀಯ ಬೆಳವಣಿಗೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದರು. 

ಕಾಲಕ್ರಮೇಣ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅವರ ಸೇವೆ ಗಮನಾರ್ಹವಾಗಿದೆ. ಬಸವ ಸಮಿತಿಯ ಉತ್ಸವ ಸಮಿತಿಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಬಸವ ತತ್ವಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ. ವೀರಶೈವ-ಲಿಂಗಾಯತ ಸಮಾಜದ ಮುಖಂಡರಾಗಿ ಸಮಾಜದ ಜನರ ಮೇಲೆ ಅನ್ಯಾಯವಾದಾಗ ಧೈರ್ಯವಾಗಿ ಧ್ವನಿ ಎತ್ತಿ ನ್ಯಾಯ ದೊರಕಿಸುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಅನೇಕ ಜನಪರ ಚಟುವಟಿಕೆಗಳಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಅವರ ಗುಣವೇ ಅವರನ್ನು ಜನಸಾಮಾನ್ಯರ ಮನಸ್ಸಿನಲ್ಲಿ ವಿಶೇಷ ಸ್ಥಾನಕ್ಕೆ ಕೊಂಡೊಯ್ದಿದೆ.

ಸರಳತೆ, ಸೌಜನ್ಯ, ನಿಷ್ಠೆ ಹಾಗೂ ಜನಸ್ನೇಹಿ ವ್ಯಕ್ತಿತ್ವ ಸಂಗಮೇಶ ನಾಗನಹಳ್ಳಿ ಅವರ ವಿಶೇಷತೆಗಳಾಗಿವೆ. ಯುವ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾ ಸಾಮಾಜಿಕ ಸಾಮರಸ್ಯ, ಅಭಿವೃದ್ಧಿ ಮತ್ತು ಸೇವಾ ಮನೋಭಾವವನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡು ಸಾಗುತ್ತಿರುವ ಅವರು, ಇಂದಿಗೂ ಸಾರ್ವಜನಿಕ ಬದುಕಿನಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ.

ಜುಲೈ 20ರಂದು ಅವರ ಜನ್ಮದಿನವನ್ನು ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾಗಿ ಆಚರಿಸಿದರು. ಅವರ ಸೇವಾ ಮನೋಭಾವ ಇನ್ನಷ್ಟು ವಿಸ್ತಾರವಾಗಲಿ, ಉತ್ತಮ ಆರೋಗ್ಯ, ಆಯುಷ್ಯ ಮತ್ತು ಶಕ್ತಿಯನ್ನು ದೇವರು ಕರುಣಿಸಲಿ. ಸಮಾಜದ ಒಳಿತಿಗಾಗಿ ಅವರು ಇನ್ನೂ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.