ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಿ: ಸಂಗಮೇಶ ಎನ್ ಜವಾದಿ ಕರೆ.
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಿ: ಸಂಗಮೇಶ ಎನ್ ಜವಾದಿ ಕರೆ.
ಬೀದರ/ಚಿಟಗುಪ್ಪಾ: ಆಧುನಿಕತೆ ಹೆಚ್ಚಾದಂತೆ ವಿವೇಚನಾಶಕ್ತಿ ಬೆಳೆಯುತ್ತಿದೆ. ಆದರೆ, ಯುವಜನತೆ ಹೆಚ್ಚು ದುಶ್ಚಟಗಳಿಗೆ ದಾಸರಾಗುತ್ತಿರುವುದು ಕಳವಳಕಾರಿಯಾಗಿದೆ. ವ್ಯಸನಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕು.ಮನುಷ್ಯನಿಗೆ ಯಾವುದೇ ಬಗೆಯ ಸಿರಿ-ಸಂಪತ್ತುಗಳಿದ್ದರೂ ಆರೋಗ್ಯಭಾಗ್ಯದ ಮುಂದೆ ಅವೆಲ್ಲವೂ ಗೌಣ, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಇಲ್ಲವೇ ಇಲ್ಲ. ಆರೋಗ್ಯಕರ ಜೀವನದ ಮುಂದೆ ಎಲ್ಲವೂ ಶೂನ್ಯ.
ಸಮಾಜ ಹಾಳು ಮಾಡುವ ದುಶ್ಚಟಗಳಿಂದ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಿ, ಕೈಜೋಡಿಸಬೇಕು
ಎಂದು ಸಾಹಿತಿ, ಪರಿಸರವಾದಿ ಸಂಗಮೇಶ ಎನ್ ಜವಾದಿ ನುಡಿದರು.
ಅವರು ಇತ್ತೀಚೆಗೆ ನಗರದ ವಿವಿಧ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗಾಗಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಯೋಜಿಸಿದ್ದ ಜಾಗೃತಿ/ಪಾದಯಾತ್ರೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು
ಇಂದಿನ ಯುವ ಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ದೇಶ ಕಟ್ಟುವ ಹೊಣೆಗಾರಿಕೆ ಹೊತ್ತ ಯುವಜನಾಂಗ ಈ ರೀತಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ದುಶ್ಚಟಗಳು ಹೊಂದಿದ ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೇ, ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕ ವಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ತಂಬಾಕಿನಂತಹ ವಸ್ತುಗಳ ಸೇವನೆ ಕೊನೆಗೆ ಪ್ರಾಣಕ್ಕೆ ಕುತ್ತು ತರುವಂತಹ ಮಾದಕ ವಸ್ತುಗಳ ವ್ಯಸನಿಯ ನ್ನಾಗಿಸುತ್ತದೆ. ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಪ್ರತಿ ವ್ಯಕ್ತಿಯು ನೈತಿಕ ಅಧಃಪತನಕ್ಕೊಳಗಾಗಿ ಕುಟುಂಬ ಮತ್ತು ಸಮಾಜದಲ್ಲಿ ಯಾವುದೇ ಗೌರವ ಮತ್ತು ಘನತೆ ರಹಿತ ಬದುಕು ಸಾಗಿಸುವ ಪರಿಸ್ಥಿತಿ ಬಂದೊದಗುತ್ತದೆ. ಮಾದಕ ವಸ್ತುಗಳಿಂದ ಯಾವುದೇ ಲಾಭವಿಲ್ಲವಾದರೂ ನಷ್ಟವೇ ಹೆಚ್ಚಿರುವುದರಿಂದ ಇವುಗಳಿಂದ ದೂರವಿರುವುದೇ ಲೇಸು.ಮಾದಕ ವಸ್ತುಗಳ ಸೇವನೆಯಿಂದ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಹದಿಹರೆಯದವರು ಇವುಗಳ ದಾಸರಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಬೇಕು. ಪ್ರಾರ್ಥನೆ, ಕೌಟುಂಬಿಕ ಸಾಮರಸ್ಯ, ಸಾಂಸ್ಕೃತಿಕ ವಿಚಾರ ಮತ್ತು ಭಾವನೆಗಳ ಪರಸ್ಪರ ವಿನಿಮಯ, ಉತ್ತಮ ಜೀವನ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸಕರಾತ್ಮಕ ಭಾವನೆ ಹೆಚ್ಚಿಸಿಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು.ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಬಳಕೆ ಹಾಗೂ ಮೊಬೈಲ್ ವ್ಯಸನ ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿದೆ.ಒಬ್ಬ ವ್ಯಸನಿ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಶಿಕ್ಷಣ, ಉದ್ಯೋಗ, ಗುರಿ ಎಲ್ಲವನ್ನೂ ಮರೆತು ಬದುಕಿನ ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳುತ್ತಾನೆ. ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಜಾರುತ್ತಾನೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಸನಿ ಇದ್ದರೆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ವ್ಯಸನ ಎಂಬ ಪದ ಕೇಳಿದ ತಕ್ಷಣ ನಮಗೆ ನೆನಪಾಗುವುದು ತಂಬಾಕು, ಮದ್ಯಪಾನ, ಡ್ರಗ್ಸ್ ನಂತಹ ಮಾದಕ ವಸ್ತುಗಳು. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ವ್ಯಸನಗಳ ಸ್ವರೂಪ ಬದಲಾಗಿದೆ. ಆನ್‍ಲೈನ್ ಗೇಮಿಂಗ್, ಜೂಜು, ಮೊಬೈಲ್ ಬಳಕೆ ಮುಂತಾದ ಡಿಜಿಟಲ್ ವ್ಯಸನಗಳೂ ನಮ್ಮ ಯುವಜನತೆಯನ್ನು ಆವರಿಸುತ್ತಿವೆ. ಈ ಎಲ್ಲಾ ವ್ಯಸನಗಳು ಒಂದು ರೀತಿಯಲ್ಲಿ ಗೆದ್ದಲು ಹುಳದಂತೆ. ಸಣ್ಣ ಮಕ್ಕಳಿಂದ ದೊಡ್ಡ ವ್ಯಕ್ತಿಯವರೆಗೆ, ಅವನ ಕುಟುಂಬವನ್ನು ಮತ್ತು ಇಡೀ ಸಮಾಜವನ್ನು ಒಳಗಿನಿಂದಲೇ ತಿಂದುಹಾಕುತ್ತವೆ.
ಈ ಬಗೆ ಸದಾ ಜಾಗೃತರಾಗಿರಬೇಕು.
ಆರೋಗ್ಯವಂತ ಮತ್ತು ಸಶಕ್ತ ಸಮಾಜಕ್ಕಾಗಿ ವ್ಯಸನಮುಕ್ತ (ಮದ್ಯ, ತಂಬಾಕು, ಡ್ರಗ್ಸ್ ಮುಕ್ತ) ಸಮಾಜ ನಿರ್ಮಾಣ ದೇಶದ ಭವಿಷ್ಯವಾಗಿರುವ ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ಯುವಜನತೆ ದುಶ್ಚಟಗಳಿಗೆ ದಾಸರಾಗದೆ,
ಉತ್ತಮ ಜೀವನದ ಕಡೆಗೆ ಗಮನ ಹರಿಸಬೇಕು.ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೆ ಇಲ್ಲ, ಆದ್ದರಿಂದ ವ್ಯಸನ ಮುಕ್ತರಾಗಿ ಬದುಕಬೇಕು.ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಬೀಡಿ, ಗುಟ್ಕಾ, ಮದ್ಯಪಾನದಂತಹ ಚಟಗಳನ್ನು ತ್ಯಜಿಸಿ, ಬದುಕನ್ನು ಸುಧಾರಿಸಿಕೊಳ್ಳಲು ಪ್ರತಿಜ್ಞೆ ಮಾಡುವುದು ಅತ್ಯಗತ್ಯವಾಗಿದೆ .
ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವ ಅರಿತು, ಜಾಗೃತಿ ಮೂಡಿಸುವ ಮೂಲಕ ಈ ಅಭಿಯಾನದಲ್ಲಿ ಕೈಜೋಡಿಸಬೇಕು. ಆತ್ಮಸಂಯಮ, ಕುಟುಂಬದ ಬೆಂಬಲ ಮತ್ತು ಅರಿವಿನ ಕಾರ್ಯಕ್ರಮಗಳ ಮೂಲಕ ವ್ಯಸನದಿಂದ ಮುಕ್ತಿ ಸಾಧ್ಯ.
ಯುವಶಕ್ತಿಯ ಮೇಲೆ ಅಪರಿಮಿತ ಅಭಿಮಾನ ಹೊಂದಿದ್ದ ಬಸವಣ್ಣನವರು, ವಿವೇಕಾನಂದರಂಥ ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾತ್ವಿಕ ಜೀವನ ಸಾಗಿಸಬೇಕು.
ಭವ್ಯ ಭಾರತದ ಸತ್ಪ್ರಜೆಗಳಾಗಿರುವ ವಿದ್ಯಾರ್ಥಿ ಸಮುದಾಯ ಇವುಗಳಿಂದ ದೂರವಿರುವ ಬಗ್ಗೆ ಪ್ರತಿಜ್ಞೆ ಮಾಡಬೇಕು. ಮದ್ಯವ್ಯಸನಿಗಳಿಗೆ ಇವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಬೇಕು ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಬೇಕು.
ವ್ಯಸನಮುಕ್ತ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕು.
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಂಗಮೇಶ ಎನ್ ಜವಾದಿ ರವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಗಣ್ಯರು, ಶಿಕ್ಷಕರು, ಯುವಕರು, ವಿದ್ಯಾರ್ಥಿಗಳು, ಮಕ್ಕಳು, ಪಾಲಕರು, ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
