ಅನುವಾದಗಳಿಂದ ಮಾತ್ರ ಜಗತ್ತನ್ನು ತಲುಪಲು ಸಾಧ್ಯ: ಸಾಹಿತಿ ಪ್ರಭಾಕರ ಜೋಶಿ
ಡಾ. ಅಂಬುಜಾ ಮಳಖೇಡಕರ್ ಅನುವಾದಿಸಿದ ಮೂರು ಪುಸ್ತಕಗಳ ಬಿಡುಗಡೆ
ಅನುವಾದಗಳಿಂದ ಮಾತ್ರ ಜಗತ್ತನ್ನು ತಲುಪಲು ಸಾಧ್ಯ: ಸಾಹಿತಿ ಪ್ರಭಾಕರ ಜೋಶಿ
ಕಲಬುರಗಿ : ಜಗತ್ತಿನ ಎಲ್ಲಡೆಯಿಂದ ಜ್ಞಾನ ಪಡೆಯಲು ಅನುವಾದಗಳು ಸಮರ್ಥ ಮಾರ್ಗವಾಗಿದ್ದು, ಅನುವಾದ ಸಾಹಿತ್ಯದಿಂದಲೇ ಅಂತಾರಾಷ್ಟೀಯ ಮಟ್ಟಕ್ಕೆ ತಲುಪಲು ಸಾಧ್ಯ ಎಂದು ಹಿರಿಯ ಪತ್ರಕರ್ತ, ಸಾಹಿತಿ ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಭವನದಲ್ಲಿ ಸುವನಾ ಪ್ರಕಾಶನ ಆಯೋಜಿಸಿದ್ದ ಡಾ.ಅಂಬುಜಾ ಮಳಖೇಡಕರ್ ಅನುವಾದಿಸಿದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತ್ರಿಭಾಷಾ ಸೂತ್ರವನ್ನು ಕೈಬಿಟ್ಟು ಕೇವಲ ಎರಡೇ ಭಾಷೆಗಳು ಕಲಿಕೆಗೆ ಸಾಕು ಎನ್ನುವ ಮನಸ್ಥಿತಿಯಿಂದಾಗಿ ನಾವು ಜ್ಞಾನವಂಚಿತರಾಗುತ್ತೇವೆ. ಬಹುಭಾಷೆಗಳಾಡುವ ನಮ್ಮ ದೇಶದಲ್ಲಿ ಹಲವು ಭಾಷೆಗಳಲ್ಲಿ ಕಲಿಕೆಗೆ ಅವಕಾಶ ಇರಬೇಕು. ಡಾ.ಅಂಬುಜಾ ಅವರಿಗೆ ಬಹುಭಾಷೆ ಬರುವ ಕಾರಣ ಉತ್ತಮ ಅನುವಾದಕರಾಗಿದ್ದಾರೆ ಎಂದರು.
ಪುಸ್ತಕಗಳನ್ನು ಪರಿಚಯಿಸಿದ ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಮಾತನಾಡಿ, ಭಾರತದ ನಿಜವಾದ ಶಕ್ತಿ ಎಂದರೆ ಯುವಜನಾಂಗ. ಯುವ ಸಮುದಾಯಕ್ಕೆ ಪರಂಪರೆಯ ಪ್ರಜ್ಞೆ ಮತ್ತು ಆಧುನಿಕ ಆವಿಷ್ಕಾರಗಳ ಅರಿವು ಏಕಕಾಲದಲ್ಲಿ ಹೊಂದರಬೇಕು. ಯುವ ಶಕ್ತಿಯನ್ನು ದೇಶದ್ರೋಹಿಗಳು, ಸಮಾಜಘಾತಕರು ಬಳಸಿಕೊಳ್ಳದಂತೆ ಜಾಗೃತ ಪ್ರಜ್ಮೆಯೂ ಇರಬೇಕು. ಇಂತಹ ಜಾಗೃತ ಸ್ಥಿತಿ ಬರಬೇಕಾದರೆ, ಭಾರತ ಬೆಳೆದು ಬಂದ ಬಗೆ ಮತ್ತು ಹಿರಿಯರ ಹೋರಾಟ ತ್ಯಾಗ ಬಲಿದಾನಗಳ ಇತಿಹಾಸ ತಿಳಿದುಕೊಳ್ಳಬೇಕು. ಡಾ.ಅಂಬುಜಾ ಮಳಖೇಡಕರ್ ಅನುವಾದಿಸಿದ ಮೂರೂ ಪುಸ್ತಕಗಳ ಈ ಬಗೆಯ ತಿಳಿವಳಿಕೆ ನೀಡುವಲ್ಲಿ ಸಮರ್ಥವಾಗಿದ್ದು, ಮುಖ್ಯವಾಗಿ ಯುವಕರು ಈ ಪುಸ್ತಕಗಳನ್ನು ಓದಬೇಕು ಎಂದರು.
ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಪುಸ್ತಕ ಪರಿಚಯಿಸಿದ ಹಿರಿಯ ರಂಗಕಲಾವಿದ, ಸಾಹಿತಿ ಡಾ.ಶಶಿಧರ ನರೇಂದ್ರ ಧಾರವಾಡ ಅವರು, ಬೇರೆ ಭಾಷೆಯ ಮಾಹಿತಿಪೂರ್ಣ ಪುಸ್ತಕಗಳನ್ನು ಕನ್ನಡ ಓದುಗರಿಗೂ ಲಭ್ಯವಾಗಲಿ ಎಂದ ಸದುದ್ದೇಶದಿಂದ ಡಾ.ಅಂಬುಜಾ ಅವರು, ಉತ್ತಮ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದಿನ ಯುವಕರು ಈ ಪುಸ್ತಕಗಳನ್ನು ಓದಿ, ಭಾರತದ ಸ್ವಾತಂತ್ರö್ಯ ಲಭಿಸಿದ ಹೋರಾಟವನ್ನು ಮತ್ತು ಆ ಕಾಲಘಟ್ಟದ ಸಾಮಾಜಿಕ ಸ್ಥಿತಿಯನ್ನು ನೇರವಾಗಿ ಅರ್ಥಮಾಡಿಕೊಳ್ಳಬಹುದು ಎಂದರು.
ಕಲಬುರಗಿಯ ಹೆಸರಾಂತ ವೈದ್ಯಸಾಹಿತಿ ಡಾ.ಎಸ್.ಎಸ್.ಗುಬ್ಬಿ ಅವರ ಆತ್ಮಕಥನವನ್ನು ಹಿಂದಿ ಭಾಷೆಗೆ ಆತ್ಮ ಕವಚ ಹೆಸರಿನಿಂದ ಅನುವಾದಗೊಂಡ ಕೃತಿಯನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘ ಬೆಂಗಳೂರಿನ ಅಧ್ಯಕ್ಷ ಡಾ.ಎಸ್.ಮಂಜುನಾಥ ಪರಿಚಯಿಸಿದರು. ಸುವನಾ ಪ್ರಕಾಶನದ ಸ್ಮರಣಿಕೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಬಿಡುಗಡೆ ಮಾಡಿದರು. ಮೂಲಲೇಖಕರಾದ ಡಾ.ಎಸ್.ಎಸ್. ಗುಬ್ಬಿ, ಸುನಂದಾ ಕುಲಕರ್ಣಿ, ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷ ಅವಿನಾಶ ಕುಲಕರ್ಣಿ ಉಪಸ್ಥಿತರಿದ್ದರು. ಲೇಖಕಿ-ಅನುವಾದಕಿ ಡಾ.ಅಂಬುಜಾ ಮಳಖೇಡಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶಕಿ ಸುಮನ ಮಳಖೇಡಕರ್ ವಂದಿಸಿದರು.
ಪ್ರಸಾದ ಅಷ್ಟಗಿ ನಿರೂಪಿಸಿದರು. ಗಾಯಕ ರಮೇಶ ಜೋಶಿ, ನಂದಕಿಶೋರ ಮಳಖೇಡಕರ್, ಸಿ.ಎಸ್.ಮಾಲಿಪಾಟೀಲ, ವಿಜಯಕುಮಾರ ರೋಣದ, ಸುಮಂಗಲಾ ಚಕ್ರವರ್ತಿ, ಅನಿತಾ ಸುಬೇದಾರ, ಶ್ರೀಮತಿ ಗುಬ್ಬಿ, ಕಮಲಾಕರ ಸುರಪುರ, ಉಮೇಶ ಚಿತ್ತಾಪುರ, ಪ್ರೊ.ಜಿ.ಎಸ್.ಕುಲಕರ್ಣಿ, ಬಿ.ಎಂ.ರಾವೂರ ಇತರರು ಇದ್ದರು.

