ಹೃದಯವಂತರು ಮತ್ತು ಸೃಜನಶೀಲರಿಗೆ ಮಾತ್ರ ರಂಗಮಾಧ್ಯಮ ಗ್ರಹಿಸಲು ಸಾಧ್ಯ: ಪ್ರಭಾಕರ ಜೋಶಿ
ಹೃದಯವಂತರು ಮತ್ತು ಸೃಜನಶೀಲರಿಗೆ ಮಾತ್ರ ರಂಗಮಾಧ್ಯಮ ಗ್ರಹಿಸಲು ಸಾಧ್ಯ: ಪ್ರಭಾಕರ ಜೋಶಿ
ಕಲಬುರಗಿ: ನಾಟಕಕಾರನಿಗೆ ಭೂತಕಾಲದ ಓದು ಹಾಗೂ ಅನುಭವದ ಜೊತೆಗೆ ವರ್ತಮಾನದ ಅರಿವು ಇದ್ದಾಗ ಮಾತ್ರ ರಂಗಮಾಧ್ಯಮಕ್ಕೆ ನ್ಯಾಯ ಒದಗಿಸಲು ಸಾಧ್ಯ. ನಾಟಕಕಾರನಿಗೆ ವಸ್ತು, ಘಟನೆ, ತಂತ್ರಗಾರಿಕೆ, ಪಠ್ಯಭಾಷೆ ಹಾಗೂ ರಂಗಭಾಷೆಯ ಜ್ಞಾನ ಅಗತ್ಯ ಎಂದು ಡೆಸ್ಕ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಹಾಗೂ ಸಾಹಿತಿ ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಕಛೇರಿಯ ಕಾರ್ಯಕ್ರಮದಲ್ಲಿ ಮಾತನಾಡಿ ‘ವೀರಭೋಗ್ಯ ವಸುಂಧರಾ’ ನಾಟಕದಲ್ಲಿನ ರೈತನ ಬವಣೆ ಹಾಗೂ ‘ತ್ರಯಸ್ಥ’ ನಾಟಕದಲ್ಲಿ ಮನುಷ್ಯನ ಬದುಕಿನ ಬಾಲ್ಯ, ಯೌವನ ಮತ್ತು ಮುಪ್ಪಿನ ಅವಸ್ಥೆಗಳ ಚಿತ್ರಣದ ಕುರಿತು ಕೃತಿಗಳ ಅವಲೋಕನ ಮಾಡಿದರು.
ಕೃತಿಕಾರ, ರಂಗ ನಿರ್ದೇಶಕ ಹಾಗೂ ಸಾಹಿತಿ ಡಾ. ವಿಶ್ವರಾಜ ಪಾಟೀಲ ಮಾತನಾಡಿ, ಈ ಕೃತಿ ಪ್ರಕಟಣೆಗೆ ಶ್ರೀನಿವಾಸ ವೈದ್ಯರ ಆತ್ಮಕಥನ ಮೂಲವಸ್ತುವಾಗಿದ್ದು, ಅದರೊಂದಿಗೆ ತಮ್ಮ ಜೀವನಾನುಭವ ಹಾಗೂ ಕಲ್ಪನಾಶಕ್ತಿಯನ್ನು ಒಳಗೊಂಡಿರುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಸಾಹಿತಿ ವಿಶ್ವನಾಥ ಭಕರೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮ ನಿರೂಪಿಸಿದರು.
ಡಾ. ಗವಿಸಿದ್ಧಪ್ಪ ಪಾಟೀಲ, ಡಾ. ಶ್ರೀಶೈಲ ನಾಗರಾಳ, ಸಿದ್ಧರಾಮ ಸರಸಂಬಿ, ರಾಜೇಂದ್ರ ಝಳಕಿ, ಡಾ. ಸಿದ್ಧಪ್ಪ ಹೊಸಮನಿ, ರೇವಣಸಿದ್ಧಪ್ಪ ದುಕಾನ, ವಿನೋದ ಪಾಟೀಲ, ಡಾ. ಸುರೇಶ ಎಲ್. ಜಾಧವ, ಡಾ. ಚಿ.ಸಿ. ನಿಂಗಣ್ಣ, ಡಾ. ಸಿದ್ಧರಾಮಯ್ಯ ಮಠ, ಡಾ. ಶಿವಶರಣಪ್ಪ ದಾಬಾ ಹಾಗೂ ಹಣಮಂತರಾಯ ಸಲಗರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

