ಅಂಧ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದು ಸಮಾಜದ ಜವಾಬ್ದಾರಿ: ಶರಣಗೌಡ ಪಾಟೀಲ್ ಪಾಳಾ

ಅಂಧ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದು ಸಮಾಜದ ಜವಾಬ್ದಾರಿ: ಶರಣಗೌಡ ಪಾಟೀಲ್ ಪಾಳಾ

ಅಂಧ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದು ಸಮಾಜದ ಜವಾಬ್ದಾರಿ: ಶರಣಗೌಡ ಪಾಟೀಲ್ ಪಾಳಾ

ಕಲಬುರಗಿ, ಜೂನ್ 19: ಅಂಧತ್ವವು ಕೇವಲ ದೈಹಿಕ ಸವಾಲಾಗಿದ್ದು, ಅದು ವ್ಯಕ್ತಿಯ ಪ್ರತಿಭೆ, ಬುದ್ಧಿವಂತಿಕೆ ಹಾಗೂ ಸಾಧನೆಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ ಎಂದು ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಹೇಳಿದರು.

ನಗರದ ಮಾತೋಶ್ರೀ ಅಂಬಾಬಾಯಿ ಅಂಧ ಬಾಲಕಿಯರ ವಸತಿ ಶಾಲೆಯಲ್ಲಿ ಸಮಗ್ರ ಅಭಿವೃದ್ಧಿ ಸಂಸ್ಥೆ ಹಾಗೂ ಹೆಡ್ ಹೆಲ್ಡ್ ಹೈ ಫೌಂಡೇಶನ್ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಸಸಿಗಳು ವಿತರಣೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರೂ ಅಂಧ ಮಕ್ಕಳನ್ನು ಕೀಳಾಗಿ ಕಾಣದೆ, ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿ, ಪ್ರೀತಿ, ಗೌರವ ಮತ್ತು ಸಹಕಾರದ ಮನೋಭಾವದಿಂದ ನಡೆದುಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಗೌರವಾಧ್ಯಕ್ಷ ಶಿವರಾಜ ಅಂಡಗಿ, ಅಂಧ ಮಕ್ಕಳಿಗೆ ಬೆಳಕು ಕಣ್ಣಿನಲ್ಲಿ ಕಾಣದಿರಬಹುದು. ಆದರೆ ಅವರ ಮನಸ್ಸಿನಲ್ಲಿ ಜ್ಞಾನ ಮತ್ತು ಪ್ರತಿಭೆಯ ಅಪಾರ ಬೆಳಕು ಇರುತ್ತದೆ. ಆ ಬೆಳಕನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.

ನಾಲ್ಕು ಚಕ್ರ ತಂಡದ ಅಧ್ಯಕ್ಷೆ ಮಾಲಾ ಕಣ್ಣಿ ಮಾತನಾಡಿ, ಅಂಧ ಮಕ್ಕಳಿಗೆ ಕೇವಲ ಸಹಾನುಭೂತಿ ಸಾಲದು. ಅವರಿಗೆ ಸಮಾನ ಅವಕಾಶಗಳು, ಗುಣಮಟ್ಟದ ಶಿಕ್ಷಣ, ಬ್ರೈಲ್ ಲಿಪಿಯ ಮೂಲಕ ಕಲಿಕೆ, ಆಧುನಿಕ ತಂತ್ರಜ್ಞಾನ ಹಾಗೂ ನಿರಂತರ ಪ್ರೋತ್ಸಾಹ ದೊರೆತರೆ ಅವರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಬಲ್ಲರು ಎಂದು ಅಭಿಪ್ರಾಯಪಟ್ಟರು.

ಮಾತೋಶ್ರೀ ಅಂಬಾಬಾಯಿ ಅಂಧ ಬಾಲಕಿಯರ ವಸತಿ ಶಾಲೆಯ ಅಧ್ಯಕ್ಷ ದತ್ತು ಅಗರ್ವಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಚಾರ್ಯೆ ಸಂಗೀತ ಠಾಕೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮಕ್ಕಳಿಗೆ ಸಂಸ್ಥೆ ವತಿಯಿಂದ ಸಖಿ ಕಿಟ್ಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಾಹಿತಿ ವಿಶ್ವನಾಥ ಭಕರೆ, ಗಿರೀಶಗೌಡ ಇನಾಮದಾರ, ಸಾಹಿತಿ ಎಚ್.ಎಸ್. ಬರಗಲಿ ,ಸಂಸ್ಥೆಯ ಸದಸ್ಯರು ಅರವಿಂದಕುಮಾರ ಠಾಕೂರ್, ವಿಠ್ಠಲ ಕಂಬಾರ, ನಿರ್ಮಲ ಸನಬಂಗಿ, ನೀಲಮ್ಮ ಗೊಬ್ಬೂರ,

ಹೆಡ್ ಹೆಲ್ಡ್ ಹೈ ಫೌಂಡೇಶನ್ ನ ಸಿಬ್ಬಂದಿ ಸಿದ್ದಮ್ಮ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಬಿರಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಾರಾಮ ರಾಜಮಾನೆ ಕಾರ್ಯಕ್ರಮ ನಿರೂಪಿಸಿ, ರಾಹುಲ್ ವಾಡಿ ವಂದಿಸಿದರು.