ಸೆಪ್ಟೆಂಬರ್ 17 ಆಚರಣೆ ಕುರಿತು ಆದೇಶ ತಿದ್ದುಪಡಿಗೆ ಒತ್ತಾಯ

ಸೆಪ್ಟೆಂಬರ್ 17 ಆಚರಣೆ ಕುರಿತು ಆದೇಶ ತಿದ್ದುಪಡಿಗೆ ಒತ್ತಾಯ

ಸೆಪ್ಟೆಂಬರ್ 17 ಆಚರಣೆ ಕುರಿತು ಆದೇಶ ತಿದ್ದುಪಡಿಗೆ ಒತ್ತಾಯ 

ಕಲಬುರಗಿ, ಜೂನ್ 17: ಹೈದರಾಬಾದ್-ಕರ್ನಾಟಕ ವಿಮೋಚನೆ ದಿನಾಚರಣೆಗೆ ಸಂಬಂಧಿಸಿದಂತೆ 1998 ರಲ್ಲಿ ಹೊರಡಿಸಿದ ಸರ್ಕಾರದ ಆದೇಶವನ್ನು ತಿದ್ದುಪಡಿಗೊಳಿಸಿ, ಪ್ರಸ್ತುತ ತಿದ್ದುಪಡಿ ಮಾಡಿ, ಐತಿಹಾಸಿಕ ಸತ್ಯಾಂಶಗಳ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ನಡೆಸಬೇಕು ಎಂದು ಕರ್ನಾಟಕ ಯುವಜನ ಫೆಡರೇಷನ್ (KYF) ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಪ್ರಥಮ ಗೃಹಮಂತ್ರಿ ಹಾಗೂ ಉಪಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು 1947 ರಿಂದ 1950 ರವರೆಗೆ ತಮ್ಮ ಅನುಭವ ಮತ್ತು ದೂರದೃಷ್ಟಿಯಿಂದ ವಿವಿಧ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ವಿಲೀನಗೊಳಿಸಿದ ಐತಿಹಾಸಿಕ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು ಎಂದು ಹೇಳಿದ್ದಾರೆ. ಆಗಿನ ಕಾನೂನು ಸಚಿವ ಡಾ ಬಿ ಆರ್ ಅಂಬೇಡ್ಕರ್ ಅವರ ಸಲಹೆ ಮತ್ತು ಮಾರ್ಗದರ್ಶನವೂ, ಈ ಪೊಲೀಸ್ action ಎಂಭ 6 ದಿನಗಳ ಕಾರ್ಯಾಚರಣೆ ಹಾಗೂ ಪ್ರಕ್ರಿಯೆಗೆ ನೆರವಾಗಿತ್ತು ಎಂದು ತಿಳಿಸಿದ್ದಾರೆ.

ಹೈದರಾಬಾದ್ ಸಂಸ್ಥಾನದ ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 18 ರಂದು ತಮ್ಮ ಆಡಳಿತ ಮೋಟಾಕುಗೊಳಿಸಲು ಒಪ್ಪಿಗೆ ಸೂಚಿಸಿ ನಿಜಾಮರು ಲಿಖಿತ ರೂಪದಲ್ಲಿ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದರು. ಇಂತಹ ಐತಿಹಾಸಿಕ ದಾಖಲೆಗಳನ್ನು ಕಡೆಗಣಿಸಿ, ಸೆಪ್ಟೆಂಬರ್ 17 ರಂದು ವಿಜಯೋತ್ಸವ ಆಚರಿಸುವುದು, ಅಸತ್ಯ ಮತ್ತು ಇತಿಹಾಸದ ಅರ್ಧಸತ್ಯವನ್ನು ಜನರಿಗೆ ಬಿಂಬಿಸುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತ ಸ್ವಾತಂತ್ರ್ಯಾನಂತರ ದೇಶದಲ್ಲಿ ಸರ್ಕಾರ, ಸಚಿವ ಸಂಪುಟ ಮತ್ತು ಪ್ರಧಾನಮಂತ್ರಿ ಇದ್ದರೂ ಸಹ, ಇತಿಹಾಸದ ನೈಜ ಸಂಗತಿಗಳನ್ನು ನಿರ್ಲಕ್ಷಿಸಿ ತಪ್ಪು ಮಾಹಿತಿಯ ಆಧಾರದ ಮೇಲೆ ಆಚರಣೆಗಳನ್ನು ನಡೆಸುತ್ತಿರುವುದು ವಿಷಾದನೀಯ ಸಂಗತಿ ಎಂದು ನ್ಯಾಯವಾದಿ ಜೆನವೇರಿ ವಿನೋದಕುಮಾರ ಅಭಿಪ್ರಾಯಪಟ್ಟಿದ್ದಾರೆ.

ದೇಶ ವಿಭಜನೆಯ ನಂತರ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ ಹಾಗೂ ಆಡಳಿತಾತ್ಮಕ ಸವಾಲುಗಳ ನಡುವೆಯೂ ಭಾರತವನ್ನು ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ದಾರಿಯಲ್ಲಿ ಮುನ್ನಡೆಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಈ ಭಾಗಕ್ಕೆ ಅಪಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತಿಹಾಸವನ್ನು ತಿರುಚುವ ಮೂಲಕ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಸುಳ್ಳಿನ ಆಧಾರದ ಉತ್ಸವಗಳು ಕ್ಷಣಿಕವಾಗಿರಬಹುದು. ಆದ್ದರಿಂದ, ನಾವು ಸಲ್ಲಿಸಿದ ಮನವಿಗಳನ್ನು, ರಾಜ್ಯ ಸರ್ಕಾರವು ಕೂಡಾ ಐತಿಹಾಸಿಕ ದಾಖಲೆಗಳನ್ನು ಪರಿಗಣಿಸಿ ಸೂಕ್ತವಾಗಿ ಪರಿಶೀಲಿಸಿ ಹೊಸ ಆದೇಶ ಹೊರಡಿಸಿ ಆಚರಣೆ ಕುರಿತು ಸ್ಪಷ್ಟತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.