ಮುನಿಸಿಪಲ್ ಕಾರ್ಮಿಕರ ಖಾಯಂಗೊಳಿಕೆಗೆ ಆಗ್ರಹಿಸಿ ಪ್ರತಿಭಟನೆ
ಮುನಿಸಿಪಲ್ ಕಾರ್ಮಿಕರ ಖಾಯಂಗೊಳಿಕೆಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ಎಲ್ಲಾ ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷೆ ಕೆ. ನೀಲಾ, 2026-17ರಲ್ಲಿ ಕರ್ನಾಟಕ ಸರ್ಕಾರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದರೂ ಕಲಬುರಗಿಯಲ್ಲಿ ಡ್ರೈವರ್, ಕ್ಲೀನರ್ ಹಾಗೂ ಸ್ವೀಪರ್ ಕಾರ್ಮಿಕರನ್ನು ಇನ್ನೂ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಬಳಸಲಾಗುತ್ತಿದೆ. ಇದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದ್ದು, ಕೂಡಲೇ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ವೇಳೆ ಅಧಿಕಾರಿಗಳು ನೇರ ಪಾವತಿ ಅಡಿಯಲ್ಲಿರುವ ಪೌರ ಕಾರ್ಮಿಕರ ಖಾಯಮ್ಮಾತಿ ಪ್ರಕ್ರಿಯೆ ಹಾಗೂ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರೈವರ್, ಕ್ಲೀನರ್ ಮತ್ತು ಸ್ವೀಪರ್ ಕಾರ್ಮಿಕರನ್ನು ನೇರ ಪಾವತಿ ವ್ಯವಸ್ಥೆಗೆ ತರುವ ಕಾರ್ಯವನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಜೊತೆಗೆ ಉಳಿದ ಹದಿನೈದು ಹಕ್ಕೊತ್ತಾಯಗಳನ್ನೂ ಜಾರಿಗೊಳಿಸುವುದಾಗಿ ಹಾಗೂ ಪೌರ ಕಾರ್ಮಿಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಎಂ.ಬಿ. ಸಜ್ಜನ್, ಉಪಾಧ್ಯಕ್ಷ ನಾಗಪ್ಪ ರಾಯಚೂರಕರ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸುಧಾಮ ಧನ್ನಿ, ಕಾರ್ಯದರ್ಶಿ ಪಾಂಡುರಂಗ ಮಾವಿನಕರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಮಂತ ಬಿರಾದಾರ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಲವಿತ್ರ, ಎಸ್‌ಎಫ್‌ಐ ಮುಖಂಡ ಇಮಾಮಸಾಬ ನದಾಫ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಲೋಹಿತ್, ಉಪಾಧ್ಯಕ್ಷೆ ಕವಿತ, ಕಮಲಾಬಾಯಿ, ಸಹಕಾರ್ಯದರ್ಶಿ ವೈಶಾಲಿ, ಮರೆಪ್ಪ ಸೇರಿದಂತೆ ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
