‘ಭವರಿ’ ಕಥಾಗುಚ್ಛ ಸ್ತ್ರೀಸಂವೇದನೆಯ ಪ್ರತೀಕ: ಡಾ. ಕಾವ್ಯಶ್ರೀ ಮಹಾಗಾಂವಕರ್
‘ಭವರಿ’ ಕಥಾಗುಚ್ಛ ಸ್ತ್ರೀಸಂವೇದನೆಯ ಪ್ರತೀಕ: ಡಾ. ಕಾವ್ಯಶ್ರೀ ಮಹಾಗಾಂವಕರ್
ಕಲಬುರ್ಗಿ, ಜೂನ್ 21: ಸಣ್ಣಕಥೆಗಳು ಸಮಾಜದ ಕಾಲಮಾನ ಮತ್ತು ಜೀವನ ವಾಸ್ತವಗಳ ಪ್ರತಿಬಿಂಬಗಳಾಗಿದ್ದು, ಲೇಖಕಿ ಬಿ.ಜೆ. ಪಾರ್ವತಿ ಸೋನಾರೆ ಅವರ ‘ಭವರಿ’ ಕಥಾಸಂಕಲನವು ಸ್ತ್ರೀಸಂವೇದನೆ ಮತ್ತು ಸಾಮಾಜಿಕ ಕಳಕಳಿಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಕೃತಿಯಾಗಿದೆ ಎಂದು ಹಿರಿಯ ಲೇಖಕಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ‘ಭವರಿ’ ಕಥಾಸಂಕಲನದ ವಿಮರ್ಶಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀ ಶೋಷಣೆ, ಅನ್ಯಾಯ ಹಾಗೂ ಅತ್ಯಾಚಾರದಂತಹ ಘಟನೆಗಳನ್ನು ಲೇಖಕಿ ಪಾತ್ರ, ವಸ್ತು, ಸಂಭಾಷಣೆ ಮತ್ತು ಸ್ಥಳೀಯ ಭಾಷೆಯ ಬಳಕೆಯ ಮೂಲಕ ವಿಶಿಷ್ಟವಾಗಿ ನಿರೂಪಿಸಿದ್ದಾರೆ ಎಂದರು.
ಬೀದರ ಮತ್ತು ವಿಜಯಪುರ ಭಾಗದ ಪ್ರಾದೇಶಿಕ ಭಾಷೆಯ ಬಳಕೆಯಿಂದ ಕಥೆಗಳಿಗೆ ವಿಶೇಷ ಮೆರಗು ದೊರೆತಿದ್ದು, ಸಂಕಲನದಲ್ಲಿರುವ ಐದು ಕಥೆಗಳು ಸ್ತ್ರೀಸಂವೇದನೆ, ಸಾಮಾಜಿಕ ಅಸಮಾನತೆ ಮತ್ತು ಮಹಿಳೆಯರ ಬದುಕಿನ ಹೋರಾಟಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ವಹಿಸಿದ್ದರು. ಡಾ. ಶ್ರೀಶೈಲ ನಾಗರಾಳ ಹಾಗೂ ಡಾ. ಸಂಗನಗೌಡ ಹಿರೇಗೌಡ ಕೃತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಬಿ.ಎಚ್. ನಿರಗುಡಿ, ಡಾ. ಗವಿಸಿದ್ಧಪ್ಪ ಪಾಟೀಲ್, ಡಾ. ಶಿವಶರಣಪ್ಪ ದಾಬಾ, ಡಾ. ಶೀಲಾದೇವಿ ಬಿರಾದಾರ, ನೀಲಮ್ಮ ನೆಲೋಗಿ, ಡಾ. ಜಯದೇವಿ ಗಾಯಕವಾಡ, ಡಾ. ಸಿದ್ಧಪ್ಪ ಹೊಸಮನಿ, ಎಸ್.ಎಸ್. ಪಾಟೀಲ್, ರೇವಣಸಿದ್ಧಪ್ಪ ದುಕಾನ, ಡಾ. ಪೀರಪ್ಪ ಸಜ್ಜನ, ವಿಶ್ವನಾಥ ಭಕರೆ, ಸಿ.ಎಸ್. ಮಾಲಿಪಾಟೀಲ್, ಭೀಮಶೆಟ್ಟಿ ಮುಕ್ಕಾ, ಶಿವಾನಂದ ಮಠಪತಿ, ಎಸ್.ಎಸ್. ಹೂಗಾರ, ರಾಜೇಂದ್ರ ಝಳಕಿ ಹಾಗೂ ಸಿದ್ಧರಾಮ ಸರಸಂಬಿ ಉಪಸ್ಥಿತರಿದ್ದರು.
