ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿ: ಶಾಸಕ ಪ್ರಭು ಚವ್ಹಾಣ
ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿ: ಶಾಸಕ ಪ್ರಭು ಚವ್ಹಾಣ--
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಜೂನ್ 21ರ ಬೆಳಗ್ಗೆ 6.30 ಗಂಟೆಗೆ ಔರಾದ(ಬಿ) ತಾಲ್ಲೂಕು ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿರುವ ಯೋಗ ಇಂದು ವಿಶ್ವದಾದ್ಯಂತ ಆರೋಗ್ಯಕರ ಜೀವನಶೈಲಿಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಸಮಾಜವು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಂತೆ ಆಹಾರ ಪದ್ಧತಿ, ಕೆಲಸದೊತ್ತಡ, ಜೀವನ ಶೈಲಿಯಲ್ಲಿ ಆದ ಬಲಾವಣೆಗಳಿಂದಾಗಿ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಮಾನಸಿಕ ಒತ್ತಡ, ಖಿನ್ನತೆಯಂತಹ ಹತ್ತಾರು ರೋಗಗಳು ಜನರನ್ನು ಪೀಡಿಸುತ್ತಿವೆ. ಇವೆಲ್ಲವುಗಳಿಗೆ ಯೋಗದಲ್ಲಿ ಪರಿಹಾರವಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದಿದ್ದಾರೆ.
ಭಾರತದ ಯೋಗ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಹಾಗೂ ಯೋಗದ ಮಹತ್ವವನ್ನು ವಿಸ್ತರಿಸುವಲ್ಲಿ ಮಹರ್ಷಿ ಪತಂಜಲಿ, ಸ್ವಾಮಿ ವಿವೇಕಾನಂದ, ಪರಮಹಂಸ ಯೋಗಾನಂದ, ತಿರುಮಲೈ ಕೃಷ್ಣಮಾಚಾರ್ಯ, ಬಿ.ಕೆ.ಎಸ್. ಅಯ್ಯಂಗಾರ್, ಬಾಬಾ ರಾಮದೇವ ಸೇರಿದಂತೆ ಅನೇಕ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ಭಾರತದ ಮೂಲದ ಯೋಗಕ್ಕೆ ಜಾಗತಿಕ ಮನ್ನಣೆ ದೊರಕುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮಾನ್ಯತೆ ದೊರಕುವಂತೆ ಮಹತ್ವದ ಪಾತ್ರ ವಹಿಸಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಅವಶ್ಯಕತೆಯಾಗಿರುವ ಯೋಗವನ್ನು ನಿತ್ಯಜೀವನದ ಭಾಗವಾಗಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಔರಾದನಲ್ಲಿಯೇ ಆಯೋಜಿಸಿರುವ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ನುರಿತ ಯೋಗ ಪಂಡಿತರು ಆಗಮಿಸಿ ಯೋಗಾಭ್ಯಾಸದ ಕುರಿತು ತರಬೇತಿ ನೀಡುತ್ತಾರೆ. ಹಾಗೆಯೇ ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ನೌಕರರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.
