ಪಠ್ಯಕ್ರಮ ಬೋಧನೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ
ಪಠ್ಯಕ್ರಮ ಬೋಧನೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ
ಕಮಲನಗರ, ಜೂನ್ 21: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ್ ಹಾಗೂ ಶಾಂತಿ ವರ್ಧಕ ಪದವಿ ಪೂರ್ವ ಕಾಲೇಜು, ಕಮಲನಗರ ಇವರ ಸಂಯುಕ್ತ ಆಶ್ರಯದಲ್ಲಿ “ಪಠ್ಯಕ್ರಮ ಬೋಧನೆಯ ಮಹತ್ವ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಶ್ವನಾಥ್ ಕಿವ್ಡೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳು ಮಾನಸಿಕ ಒತ್ತಡವಿಲ್ಲದೆ ಶಿಕ್ಷಣ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಶಿಕ್ಷಣದ ಮೂಲಕ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಆಶಯ ನುಡಿಗಳನ್ನು ಹಂಚಿಕೊಂಡ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಮಲನಗರ ತಾಲೂಕು ಅಧ್ಯಕ್ಷ ವಿಜಯಕುಮಾರ ನುದನೂರೆ, ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗಿ ಬೆಳೆಯಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಕಸಾಪ ಕಮಲನಗರ ಗೌರವ ಕಾರ್ಯದರ್ಶಿ ಮಾಧಪ್ಪ ಎಸ್. ಮಡವಾಳ, ಶಿಕ್ಷಣವು ಜೀವನದ ಎಲ್ಲ ಹಂತಗಳಲ್ಲೂ ಅಗತ್ಯವಾಗಿದ್ದು, ಜ್ಞಾನಾರ್ಜನೆ, ಕೌಶಲ್ಯಗಳ ಅಭಿವೃದ್ಧಿ, ವ್ಯಕ್ತಿತ್ವ ನಿರ್ಮಾಣ, ಆತ್ಮವಿಶ್ವಾಸ ವೃದ್ಧಿ ಹಾಗೂ ನೈತಿಕ ಮೌಲ್ಯಗಳ ಅರಿವು ಮೂಡಿಸುವಲ್ಲಿ ಪಠ್ಯಕ್ರಮ ಬೋಧನೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತ್ಯಿಕ ಸಂಗಮೇಶ್ವರ ಎಸ್. ಮುರ್ಕೆ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಹಾಗೂ ಮೊಬೈಲ್ ಬಳಕೆಯ ದುಷ್ಪರಿಣಾಮಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಭಾಗೀರಥಿ ಪಬ್ಲಿಕ್ ಶಾಲೆಯ ಮುಖ್ಯಗುರು ಮನೋಜ್ ಕುಮಾರ್ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಹಾಡು, ನೃತ್ಯ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ. ಮಾತನಾಡಿ, ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗಿರುವುದರಿಂದ ಅವರಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಂತಿ ವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಓಂಕಾರ ಸೂರ್ಯವಂಶಿ, ವಿದ್ಯಾರ್ಥಿಗಳು ಬಹುಮುಖ ವ್ಯಕ್ತಿತ್ವ ಹೊಂದಿ ತಮ್ಮ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಶಂಕರ್ ಕಾಂಬ್ಳೆ, ಶ್ರೀಕಾಂತ್ ಪಾಗೆ, ಶಿವಶಂಕರ್ ವಾಡೆಕರ್, ಸುನೀಲ್ ಬಾರೋಳೆ, ಸಿದ್ದಪ್ಪ ಸರ್, ಸುಭಾಷ್ ರಾಡೋಡ್, ಅಶ್ವಿನಿ ಕಾಂಬ್ಳೆ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅದಿಬಾ ಅಸ್ಲಂ ಪ್ರಾರ್ಥನೆ ನೆರವೇರಿಸಿದರು. ವೆಂಕಟ ಮೊರೆ ಕಾರ್ಯಕ್ರಮ ನಿರೂಪಿಸಿದರು. ಕಾಳಿದಾಸ ಬೌದ್ಧೆ ಸ್ವಾಗತಿಸಿ, ಶರಣಗೌಡ ಪಾಟೀಲ್ ವಂದಿಸಿದರು.
