5ರಂದು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ: ಶಾಸಕ ಪ್ರಭು ಚವ್ಹಾಣ
5ರಂದು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ: ಶಾಸಕ ಪ್ರಭು ಚವ್ಹಾಣ
ಔರಾದ(ಬಿ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗಾಗಿ ಜೂನ್ 5ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ತಾಲ್ಲೂಕಿನ 3 ಟಾಪರ್‌ಗಳಿಗೆ ನಗದು ಬಹುಮಾನವಿದ್ದು, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 21,000, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 11,000 ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 7,000 ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ. ಇದರೊಂದಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಔರಾದ ಹಾಗೂ ಕಮಲನಗರ ತಾಲ್ಲೂಕುಗಳ ಎಲ್ಲ ವಿದ್ಯಾರ್ಥಿಗಳನ್ನು ಉಡುಗೊರೆಯೊಂದಿಗೆ ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡಿದ ಅವರ ತಂದೆ-ತಾಯಿ ಹಾಗೂ ಶಾಲೆಗಳ ಮುಖ್ಯಗುರುಗಳು, ಶೇ.100 ಫಲಿತಾಂಶ ಪಡೆದ ಶಾಲೆಗಳ ಮುಖ್ಯಗುರುಗಳು ಮತ್ತು ಶಿಕ್ಷಕರಿಗೂ ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದೆಂದು ಹೇಳಿದ್ದಾರೆ.
ಔರಾದ್ ವಿಧಾನಸಭಾ ಕ್ಷೇತ್ರವು ಸರ್ವತೋಮುಖವಾಗಿ ಅಭಿವೃದ್ಧಿಯಾಗಬೇಕೆಂಬ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಯ ಕೇಂದ್ರಬಿಂದುವಾಗಿರುವ ಶಿಕ್ಷಣ ಕ್ಷೇತ್ರದ ಏಳಿಗೆಗೆ ಮೊದಲ ಆದ್ಯತೆ ನೀಡಿದ್ದೇನೆ. ಪ್ರತಿ ವರ್ಷ ಗ್ರಾಮ ಸಂಚಾರ ನಡೆಸಿ ಎಲ್ಲ ಶಾಲೆ-ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕುಂದು ಕೊರತೆಗಳು ಕಾಣಿಸಿದರೆ ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಅವಶ್ಯಕತೆಗೆ ತಕ್ಕಂತೆ ಶಾಲಾ-ಕಾಲೇಜು, ವಸತಿ ಶಾಲೆ, ವಸತಿ ನಿಲಯಗಳು, ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇನೆ. ಕಂಪೌಂಡ್, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಸುತ್ತಿದ್ದೇನೆ.
ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಹಾಗೂ ಶಿಕ್ಷಕರ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಶೈಕ್ಷಣಿಕ ಫಲಿತಾಂಶ ಸುಧಾರಿಸುವ ಉದ್ದೇಶದಿಂದ 2009ರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸುತ್ತಾ ಬರುತ್ತಿದ್ದೇನೆ. ಅದರಂತೆ ಈ ವರ್ಷವೂ ಕೂಡ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 900 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲ ಶಿಕ್ಷಕರು ಹೆಚ್ಚಿನ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ದೊಡ್ಡದಾಗಿದ್ದು, ಪ್ರತಿಯೊಂದು ಶಾಲೆಯೂ ಶೇ.100ರಷ್ಟು ಫಲಿತಾಂಶ ದಾಖಲಿಸಲು ಮತ್ತು ಪರೀಕ್ಷೆ ಬರೆದ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತೀರ್ಣವಾಗಬೇಕು ಎಂಬ ಸಂಕಲ್ಪದೊಂದಿಗೆ ಕೆಲಸ ಮಾಡಬೇಕು. ನಮ್ಮ ಕ್ಷೇತ್ರದ ಮಕ್ಕಳು ಕೂಡ ಐಎಎಸ್, ಐಪಿಎಸ್, ವೈದ್ಯರು, ಇಂಜಿನೀಯರ್‌ಗಳAತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆAಬ ಕನಸಿದೆ. ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು. ಶೈಕ್ಷಣಿಕ ಏಳಿಗೆಗೆ ಇಲಾಖೆ ಅಧಿಕಾರಿಗಳು ಮೇಲುಸ್ತುವಾರಿಯನ್ನು ಇನ್ನಷ್ಟು ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆಗಳ ಮುಖ್ಯಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.
*ಶಾಲಾ ಪ್ರಾರಂಭೋತ್ಸವ:* ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಔರಾದ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಜೂನ್ 1ರಂದು ಸ್ವರಸ್ವತಿಯ ಪ್ರತಿಮೆಗೆ ಪೂಜೆ ನೆರವೇರಿಸಿ, ವಿದ್ಯಾರ್ಥಿಗಳಿಗೆ ಸಹಿ ತಿನ್ನಿಸಿ, ಹೂಮಳೆ ಸುರಿಸುವ ಮೂಲಕ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಅದಕ್ಕೆ ಪೂರಕವಾಗಿ ಏನೇನು ಬೇಕೋ ಎಲ್ಲವನ್ನು ಮಾಡಿಕೊಡುತ್ತಿದ್ದೇನೆ. ಇದಕ್ಕೆ ಶಿಕ್ಷಕರು ಕೈ ಜೋಡಿಸಬೇಕು. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಬೋಧನೆ ಮಾಡಬೇಕು. ಈ ವರ್ಷದ ಫಲಿತಾಂಶ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿಸಬೇಕು. ಔರಾದನ್ನು ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ತರಲು ಯತ್ನಿಸಬಹುದು. ಶಿಕ್ಷಕರು ಪ್ರಯತ್ನಿಸಿದರೆ ಸಾಧ್ಯವಿದೆ ಎಂದು ಹೇಳಿದರು.
ಎಲ್ಲ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಬೇಕು. ಉತ್ತಮ ಫಲಿತಾಂಶ ನೀಡುವ ಜೊತೆಗೆ ಎಲ್ಲರೂ ಸರಿಯಾಗಿ ಭೋಧನೆ ಮಾಡಬೇಕು. ಸಮಯ ಪಾಲನೆ ಮಾಡಬೇಕು. ಮಕ್ಕಳ ಮನೆಗೆ ಭೇಟಿ ನೀಡಿ ನಾವು ಚನ್ನಾಗಿ ಪಾಠ ಮಾಡುತ್ತೇವೆ ಎಂದು ಪಾಲಕರ ಮನವೊಲಿಸಬೇಕು. ಪಠ್ಯ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಶಾಲೆಯ ಆವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಕಡ್ಡಾಯವಾಗಿ ಕಂಪೌಂಡ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರಲೇಬೇಕು. ಎಲ್ಲಿಯಾದರೂ ಕೊರತೆಯಿದ್ದಲ್ಲಿ ನನಗೆ ತಿಳಿಸಿ ಒದಗಿಸಲು ಕ್ರಮ ವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್, ಕ್ಷೇತ್ರ ಶಿಕ್ಷಣಾಧಿಕಾರಿ ವಾಗಂಬರ ಗಾಯಕವಾಡ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಶಿಕ್ಷಕರ ಸಂಘದ ಪಂಢರಿ ಆಡೆ, ಸೂರ್ಯಕಾಂತ ಬಿರಾದಾರ, ವಿಶ್ವನಾಥ ಬಿರಾದಾರ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಓಂಪ್ರಕಾಶ ದಡ್ಡೆ, ಆದರ್ಶ ವಿದ್ಯಾಲಯ ಪ್ರಾಂಶುಪಾಲ ಇನಾಯತ ಅಲಿ ಸೌದಾಗರ್, ಎಸ್ಡಿಎಂಸಿ ಅಧ್ಯಕ್ಷರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯಗುರುಗಳು ಹಾಗೂ ಇತರರರು ಉಪಸ್ಥಿತರಿದ್ದರು. ಡಾ.ಶಾಲಿವಾನ್ ಉದಗೀರೆ ನಿರೂಪಿಸಿ ವಂದಿಸಿದರು.
