ಮಳೆಗಾಗಿ ಹಿಂದೂ–ಮುಸ್ಲಿಂ ಸೌಹಾರ್ದ ಪ್ರಾರ್ಥನೆ: ಪೇಠಶಿರೂರ ಗ್ರಾಮದಲ್ಲಿ ವಿಶೇಷ ಪೂಜೆ

ಮಳೆಗಾಗಿ ಹಿಂದೂ–ಮುಸ್ಲಿಂ ಸೌಹಾರ್ದ ಪ್ರಾರ್ಥನೆ: ಪೇಠಶಿರೂರ ಗ್ರಾಮದಲ್ಲಿ ವಿಶೇಷ ಪೂಜೆ

ಮಳೆಗಾಗಿ ಹಿಂದೂ–ಮುಸ್ಲಿಂ ಸೌಹಾರ್ದ ಪ್ರಾರ್ಥನೆ: ಪೇಠಶಿರೂರ ಗ್ರಾಮದಲ್ಲಿ ವಿಶೇಷ ಪೂಜೆ

ಚಿತ್ತಾಪುರ, ಜು. 18: ತಾಲೂಕಿನ ಪೇಠಶಿರೂರ ಗ್ರಾಮದಲ್ಲಿ ಉತ್ತಮ ಮಳೆಯಾಗಲೆಂದು ಗ್ರಾಮಸ್ಥರು ಜಾತಿ, ಮತ, ಪಂಥದ ಭೇದವಿಲ್ಲದೆ ಒಂದಾಗಿ ಸೇರಿ ವಿವಿಧ ದೇವಸ್ಥಾನಗಳು ಹಾಗೂ ದರ್ಗಾದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದ ಲಕ್ಷ್ಮೀ ಗುಡಿ, ಮರೆಮ್ಮ ಗುಡಿ, ಮಹಾತ್ಮಾ ರೇವಪ್ಪಯ್ಯ ಗುಡಿ, ಸಿದ್ದಲಿಂಗೇಶ್ವರ ಮಠ, ಭೀಮಲಿಂಗೇಶ್ವರ ದೇವಸ್ಥಾನ ಹಾಗೂ ದೌಲ್ ಮಲಿಕ್ ದರ್ಗಾಕ್ಕೆ ಗ್ರಾಮಸ್ಥರು ಪವಿತ್ರ ಜಲವನ್ನು ಅರ್ಪಿಸಿ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಬೆಳೆ ಸಮೃದ್ಧಿಯಾಗಲಿ ಹಾಗೂ ಜನಜೀವನ ಸುಖಮಯವಾಗಿರಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಸೇರಿದಂತೆ ಹಿಂದೂ–ಮುಸ್ಲಿಂ ಸಮುದಾಯದ ಜನರು ಸೌಹಾರ್ದತೆಯಿಂದ ಭಾಗವಹಿಸಿ, ಎಲ್ಲ ಧರ್ಮಗಳ ಆರಾಧನಾ ಸ್ಥಳಗಳಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.

 ಶರಣಗೌಡ ಪಾಟೀಲ, ರಾಜಶೇಖರ ಸರ್ವಶೆಟ್ಟಿ, ಶಿವಯ್ಯ ಗುತ್ತೇದಾರ, ಕಾಶೀನಾಥ ಲಾಳಿ, ದಶರಥ ಅಂಬಲಭಾವನ, ದತ್ತು ಸರ್ವಶೆಟ್ಟಿ, ಅಲಿಸಾಬ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.