ಪ್ರೊ. ಎನ್. ಬಿ. ನಡುವಿನಮನಿ ಅವರಿಗೆ ಭಾವಪೂರ್ಣ ಸೇವಾ ನಿವೃತ್ತಿ ಸನ್ಮಾನ
ಪ್ರೊ. ಎನ್. ಬಿ. ನಡುವಿನಮನಿ ಅವರಿಗೆ ಭಾವಪೂರ್ಣ ಸೇವಾ ನಿವೃತ್ತಿ ಸನ್ಮಾನ
ಕಲಬುರಗಿ, ಮೇ 30: ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್. ಬಿ. ನಡುವಿನಮನಿ ಅವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭವನ್ನು ಗಣಿತ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಹಯೋಗದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಹಿರಿಯ ಪ್ರಾಧ್ಯಾಪಕಿ ಡಾ. ಸಿ. ಸುಲೋಚನಾ ನೆರವೇರಿಸಿದರು. ಗಣಿತ ವಿಭಾಗದ ಅಧ್ಯಕ್ಷ ಪ್ರೊ. ಎಸ್. ಎನ್. ಗಾಯಕ್ವಾಡ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅವರು ಮಾತನಾಡಿ, ಪ್ರೊ. ನಡುವಿನಮನಿ ಅವರ ಶೈಕ್ಷಣಿಕ ಬದ್ಧತೆ, ಸಂಶೋಧನಾ ಸಾಧನೆಗಳು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಎಂ. ಜಿ. ಕನ್ನೂರು, ಹಣಕಾಸು ಅಧಿಕಾರಿ ಶ್ರೀಮತಿ ಜಯಾಂಬಿಕಾ ಹಾಗೂ ಪ್ರೊ. ನಡುವಿನಮನಿ ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ನಡುವಿನಮನಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಎಸ್. ಚೆಟ್ಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ್ದ ಗಣ್ಯರು ಭಾಗವಹಿಸಿ ಪ್ರೊ. ನಡುವಿನಮನಿ ಅವರ ಶೈಕ್ಷಣಿಕ ಹಾಗೂ ಮಾನವೀಯ ಗುಣಗಳನ್ನು ಸ್ಮರಿಸಿದರು. ವಿದ್ಯಾರ್ಥಿನಿ ಆಶಾ, ವಿದ್ಯಾರ್ಥಿ ಚಂದ್ರಕಾಂತ್, ಸಂಶೋಧನಾ ವಿದ್ಯಾರ್ಥಿ ನಿತ್ಯಾನಂದ, ಹಳೆ ವಿದ್ಯಾರ್ಥಿ ಡಾ. ಕಾಶಿನಾಥ ಬಿರಾದಾರ ಹಾಗೂ ಪುತ್ರಿ ಶ್ರೀಮತಿ ಅಂಕಿತಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಭಾವುಕರಾದರು.
ಡಾ. ಮಹಾಂತೇಶ್ ಎಸ್. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರೆ, ಡಾ. ಎಸ್. ಬಿ. ಪಾಟೀಲ್ ವಂದಿಸಿದರು. ಸಮಾರಂಭವು ಆತ್ಮೀಯತೆ ಹಾಗೂ ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾಯಿತು.
