ಬಸವಾದಿ ಶರಣರ ವಚನಗಳಲ್ಲಿ ಕಾರ್ಮಿಕರ ಹೋರಾಟಗಳು ಕುರಿತು ವಿಶೇಷ ಉಪನ್ಯಾಸ
ಬಸವಾದಿ ಶರಣರ ವಚನಗಳಲ್ಲಿ ಕಾರ್ಮಿಕರ ಹೋರಾಟಗಳು ಕುರಿತು ವಿಶೇಷ ಉಪನ್ಯಾಸ
ಭಾಲ್ಕಿ, ಮೇ.23: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಸಂಗಮೇಶ್ವರ ಪದವಿ ಪೂರ್ವ ಕಾಲೇಜು, ಭಾಲ್ಕಿ ಇವರ ಸಹಯೋಗದಲ್ಲಿ “ಬಸವಾದಿ ಶರಣರ ವಚನಗಳಲ್ಲಿ ಕಾರ್ಮಿಕರ ಹೋರಾಟಗಳು” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶ್ರೀ ಬಾಜಿರಾವ್ ಮೇತ್ರೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಕನ್ನಡ ನಾಡು, ನುಡಿ ಹಾಗೂ ಭಾರತೀಯ ಸಂಸ್ಕೃತಿ ಸಮೃದ್ಧವಾಗಿದ್ದು, ಕನ್ನಡ ಭಾಷೆಯ ಬಳಕೆ ಹೆಚ್ಚಾದಷ್ಟೂ ಅದು ಇನ್ನಷ್ಟು ಬೆಳೆಯುತ್ತದೆ ಎಂದು ಹೇಳಿದರು.
ಬಸವಣ್ಣರು ಕನ್ನಡದ ಮಹಾನ್ ಆಸ್ತಿ ಆಗಿದ್ದು, ಅವರ ವಚನ ಸಾಹಿತ್ಯ ಜನರಿಗೆ ಆದರ್ಶಪ್ರಾಯವಾಗಿದೆ. ಅವರ ತತ್ವಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡಾ. ಪುಷ್ಪವತಿ ಎಸ್ ಆಶಯ ನುಡಿಗಳನ್ನಾಡಿ, ಗಡಿಭಾಗದ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಬಸವಣ್ಣರ ತತ್ವ ಮತ್ತು ಸಂದೇಶಗಳನ್ನು ಪ್ರತಿಯೊಂದು ಕಡೆ ತಲುಪಿಸುವ ಕಾರ್ಯ ನಡೆಯಬೇಕು. ಗಡಿಭಾಗಗಳಲ್ಲಿ ಕನ್ನಡ ಬಳಕೆಗೆ ಅನುಕೂಲಕರ ವಾತಾವರಣ ನಿರ್ಮಾಣವಾದರೆ ಭಾಷೆಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶ್ರೀ ಪ್ರಕಾಶ ದೇಶಮುಖ ಅವರು, ವಿಶೇಷ ಉಪನ್ಯಾಸ ನೀಡುತ್ತ , ತಂತ್ರಜ್ಞಾನ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು ಎಂದರು. ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿಯೂ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಬಸವಣ್ಣ ಮತ್ತು ಇತರ ಶರಣರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು, ಅವರ ಮನಸ್ಸು ಸದಾ ಬಡವರ ಮತ್ತು ಕಾರ್ಮಿಕರ ಪರವಾಗಿತ್ತು ಎಂದು ಹೇಳಿದರು.
ಶ್ರೀ ಪ್ರವೀಣ ಹಿರೇಮಠ ಅವರು, ಅಧ್ಯಕ್ಷತೆ ವಹಿಸಿದ್ದ ಮಾತನಾಡಿ,ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶ್ರೀ ದೇವರಾಜ ಕುಂಬಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುತ್ತಿರಬೇಕು. ಶ್ರದ್ಧೆ ಮತ್ತು ಭಕ್ತಿಯಿಂದ ಶಿಕ್ಷಣ ಪಡೆದರೆ ಜೀವನದಲ್ಲಿ ಉನ್ನತ ಮಟ್ಟ ತಲುಪಬಹುದು ಎಂದು ಹೇಳಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ ಅವರು ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಅಗತ್ಯವಿದೆ. ಪುಸ್ತಕಗಳನ್ನು ಪರಿಚಯಿಸಿ, ಕವಿಗಳು ಮತ್ತು ಕಲಾವಿದರ ಬಗ್ಗೆ ತಿಳಿಸಿದಾಗ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರಾರ್ಥನೆ ನೆರವೇರಿತು. ರಾಜೇಶ್ರೀ ಅವರು ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ ಸ್ವಾಗತಿಸಿದರು. ಸಂತೋಷ ವಂದಿಸಿದರು. ಕಾಲೇಜಿನ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
