ಅದ್ದೂರಿಯಾಗಿ ಪ್ರದರ್ಶನ ನೀಡಿತು “ಧರ್ಮದ ನುಡಿ ಬೆಂಕಿಯ ಕಿಡಿ” ಎಂಬ ನಾಟಕ
ಅದ್ದೂರಿಯಾಗಿ ಪ್ರದರ್ಶನ ನೀಡಿತು “ಧರ್ಮದ ನುಡಿ ಬೆಂಕಿಯ ಕಿಡಿ” ಎಂಬ ನಾಟಕ
ಪಟ್ಟಣದ ಶ್ರೀ ರಹಿಮಾನ್ ಶಾವಲಿ ದರಗಾದ ಉರುಸಿನ ಅಂಗವಾಗಿ ಶ್ರೀ ಗಣೇಶ ದೇವಸ್ಥಾನದ ರಂಗ ಮಂಟಪ ದಲ್ಲಿ ಸೋಮವಾರ ರಾತ್ರಿ ಶ್ರೀ ಕಟ್ಟಿಬಸವೇಶ್ವರ ನಾಟ್ಯ ಸಂಘದವರಿಂದ ಅಭಿನಯಿಸಲ್ಪಟ್ಟ “ಧರ್ಮದ ನುಡಿ ಬೆಂಕಿಯ ಕಿಡಿ” ನಾಟಕ ನಾಟ್ಯ ರಸಿಕರ ಮನಸೂರೆಗೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಸಂಗೀತ, ಅಭಿನಯ, ನಿರ್ದೇಶನ ಹಾಗೂ ನೃತ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸ್ಥಳೀಯ ಶ್ರೀ ಕಟ್ಟಿಬಸವೇಶ್ವರ ನಾಟ್ಯ ಸಂಘದವರು ಕಳೆದ ಎರಡು ತಿಂಗಳಿನಿಂದ ಪಟ್ಟ ಶ್ರಮ ಫಲ ನೀಡಿದ್ದು, ವಿಶಾಲವಾದ ಬಯಲಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ನಾಟಕದ ಪ್ರತಿಯೊಂದು ಸನ್ನಿವೇಶವನ್ನೂ ಆಸ್ವಾದಿಸಿ ಕಲಾವಿದರಿಗೆ ಭರ್ಜರಿ ಪ್ರೋತ್ಸಾಹ ನೀಡಿದರು.
ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ನಾಟಕವನ್ನು ಉದ್ಘಾಟಿಸಿ ಮಾತನಾಡಿ, “ಗ್ರಾಮೀಣ ಭಾಗಗಳಲ್ಲಿ ಮಾತ್ರ ಇಂತಹ ಸೊಗಡಿನ ನಾಟಕಗಳನ್ನು ಕಾಣಲು ಸಾಧ್ಯ. ಸಮಾಜ ತಿದ್ದುವಲ್ಲಿ ನಾಟಕಗಳ ಪಾತ್ರ ಮಹತ್ತರವಾಗಿದೆ. ಉರುಸಿನ ನಿಮಿತ್ತ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಉದ್ದೇಶದಿಂದ ಈ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಶ್ಲಾಘನೀಯ" ಎಂದು ಹೇಳಿದರು. ಅಲ್ಲದೆ, ಯಾವುದೇ ಗದ್ದಲವಿಲ್ಲದೆ ಸ್ಥಳೀಯ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲನಗೌಡ ಪಾಯಪ್ಪಗೌಡ್ರ ಮಾತನಾಡಿ, “ನಮ್ಮ ಓಣಿಯ ಯುವಕರ ಉತ್ಸಾಹ ಹಿರಿಯರಿಗೆ ಸಂತೋಷ ತಂದಿದೆ. ಉರುಸಿನ ನಿಮಿತ್ತ ನಾಟಕ ಪ್ರದರ್ಶನ ಮಾಡುವುದಾಗಿ ತಿಳಿಸಿದಾಗ ಅಪಾರ ಸಂತೋಷವಾಯಿತು. ಯುವಕರು ಸಾಕಷ್ಟು ಶ್ರಮವಹಿಸಿ ನಾಟಕ ಸಿದ್ಧಪಡಿಸಿದ್ದಾರೆ. ಎಲ್ಲರೂ ಪ್ರೋತ್ಸಾಹಿಸಬೇಕು" ಎಂದರು.
ನ್ಯಾಯವಾದಿ ಉಮೇಶ ಸಂಗನಾಳಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾದೇವಪ್ಪ ಬೇವಿನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಾಟಕದ ಗುರು ಶಂಕರ ರೊಟ್ಟಿಯವರು ಆರಂಭದಿಂದ ಅಂತ್ಯದವರೆಗೆ ನಾಟಕವನ್ನು ಅಚ್ಚುಕಟ್ಟಾಗಿ ಮುನ್ನಡೆಸಿ ಮೆಚ್ಚುಗೆ ಪಡೆದರು.
ವೇದಿಕೆಯಲ್ಲಿ ಕಶ ತೊಂಡಿಹಾಳ, ಶಂಕ್ರಣ್ಣ ದೊಡ್ಡಣ್ಣವರ, ಮುತ್ತಪ್ಪ ಮಾವಿನಕಾಯಿ, ಪರಪ್ಪ ಬೆಡಗಲ್ಲ, ಪ್ರಕಾಶ ಪಾಯಪ್ಪಗೌಡ್ರ, ಬಸವರಾಜ ಕಲಾಲಬಂಡಿ, ಉಮೇಶ ಕರಮುಡಿ, ಪ್ರಕಾಶ ಕೊತಬಾಳ, ವೀರಣ್ಣ ಗುಜಮಾಗಡಿ, ಫಕೀರಗೌಡ ಪಾಯಪ್ಪಗೌಡ್ರ, ಶಿವಣ್ಣ ಮುಗಳಿ, ಬಸವರಾಜ ಮಾಳವಾಡ, ಮಂಜುನಾಥ ಮಲ್ಲನಗೌಡ್ರ, ಪ್ರಾಚಾರ್ಯ ಅಡವಿ, ಅಶೋಕ ಬಾರಕೇರ, ಉಡಚಪ್ಪ ತಳವಾರ, ಮುತ್ತಪ್ಪ ಬಿಷ್ಟನಗೌಡ್ರ, ಶ್ರೀಕಾಂತ ಹೊಸಮನಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*
