ಪ್ರಾಥಮಿಕ ಶಾಲೆ ಪದವೀಧರ ಸಹಶಿಕ್ಷಕರಿಗೆ ಮತದಾನದ ಹಕ್ಕಿಲ್ಲ: ಅನುಚ್ಛೇದ 171(3) ತಿದ್ದುಪಡಿಗೆ ಜೆ.ಎಸ್. ವಿನೋದಕುಮಾರ ಆಗ್ರಹ
ಪ್ರಾಥಮಿಕ ಶಾಲೆ ಪದವೀಧರ ಸಹಶಿಕ್ಷಕರಿಗೆ ಮತದಾನದ ಹಕ್ಕಿಲ್ಲ: ಅನುಚ್ಛೇದ 171(3) ತಿದ್ದುಪಡಿಗೆ ಜೆ.ಎಸ್. ವಿನೋದಕುಮಾರ ಆಗ್ರಹ
ಕಲಬುರಗಿ: ಪ್ರಾಥಮಿಕ ಶಾಲೆ ಪದವೀಧರ ಸಹಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಶೈಕ್ಷಣಿಕ ತರಬೇತಿ ಒಂದೇ ಆಗಿದ್ದರೂ, ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕಿನಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ ವಿಭಾಗೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಆರೋಪಿಸಿದರು.
ಭಾರತೀಯ ಸಂವಿಧಾನದ ಅನುಚ್ಛೇದ 171(3)(C) ಪ್ರಕಾರ ಹೈಯರ್ ಸೆಕೆಂಡರಿ ಶಾಲೆಗಿಂತ ಕಡಿಮೆ ಇಲ್ಲದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಬೋಧನಾ ಅನುಭವವಿರುವ ಶಿಕ್ಷಕರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಆದರೆ 2009ರ ರಾಷ್ಟ್ರೀಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ಬಳಿಕ 1ರಿಂದ 5ನೇ ತರಗತಿ ಪ್ರಾಥಮಿಕ, 6ರಿಂದ 8ನೇ ತರಗತಿ ಮಾಧ್ಯಮಿಕ ಹಾಗೂ 9ರಿಂದ 12ನೇ ತರಗತಿ ಪ್ರೌಢಶಾಲಾ ಶಿಕ್ಷಣವಾಗಿ ವಿಂಗಡಿಸಲಾಗಿದೆ.
2015-16ರಿಂದ 6ರಿಂದ 8ನೇ ತರಗತಿಗೆ ಬೋಧಿಸುವ ಬಿ.ಇಡಿ ತರಬೇತಿ ಪಡೆದ ಶಿಕ್ಷಕರನ್ನು ಪ್ರಾಥಮಿಕ ಶಾಲೆ ಪದವೀಧರ ಸಹಶಿಕ್ಷಕರು (GPT) ಎಂದು ಪ್ರತ್ಯೇಕ ವೃಂದದಲ್ಲಿ ಸೇರಿಸಲಾಗಿದ್ದು, ಇವರಿಗೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕು ನಿರಾಕರಿಸಲಾಗಿದೆ. ಇದೇ ವೇಳೆ ಪ್ರೌಢಶಾಲೆಗೆ ನೇಮಕಗೊಂಡ ಬಿ.ಇಡಿ ಶಿಕ್ಷಕರಿಗೆ ಮತದಾನದ ಅವಕಾಶ ಇದೆ. ಒಂದೇ ತರಗತಿ, ಒಂದೇ ತರಬೇತಿ ಇದ್ದರೂ ಹಕ್ಕುಗಳಲ್ಲಿ ವ್ಯತ್ಯಾಸ ಮಾಡಿರುವುದು ಅನ್ಯಾಯ ಎಂದು ಅವರು ಹೇಳಿದರು.
ಡಿ.ಇಡಿ ಹಾಗೂ ಟಿ.ಇ.ಟಿ ಅರ್ಹತೆ ಪಡೆದವರಿಗೂ ನೇಮಕಾತಿ ಕೊರತೆಯಿಂದ ಮತದಾನದ ಹಕ್ಕು ಸಿಗುತ್ತಿಲ್ಲ. ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಸೇರಿದಂತೆ ಸಾವಿರಾರು ಶಿಕ್ಷಣ ವಲಯದ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಶಿಕ್ಷಕರ ಪರವಾಗಿ ಕೇವಲ ಸೀಮಿತ ಸಂಖ್ಯೆಯ ಮತದಾರರು ವಿಧಾನ ಪರಿಷತ್ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮೂಲತಃ ಚಿಂತಕರ ವೇದಿಕೆಯಾಗಬೇಕಾದರೆ ಶಿಕ್ಷಕರು, ಪದವೀಧರರು, ತರಬೇತಿ ಪಡೆದ ನಿರುದ್ಯೋಗಿಗಳು ಹಾಗೂ ಅತಿಥಿ ಶಿಕ್ಷಕರಿಗೂ ಸಮಾನ ಪ್ರತಿನಿಧಿತ್ವ ಸಿಗಬೇಕು. ಅನುಚ್ಛೇದ 171(3) ಅವೈಜ್ಞಾನಿಕವಾಗಿದ್ದು ಸಂಪೂರ್ಣ ತಿದ್ದುಪಡಿ ಅಗತ್ಯವಿದೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಸಮಿತಿ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಜೆ.ಎಸ್. ವಿನೋದಕುಮಾರ ತಿಳಿಸಿದ್ದಾರೆ.
