ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಸಿದ್ದತಾ ಸಮಾವೇಶಕ್ಕೆ ಚಾಲನೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು: ಮುಖಂಡರ ಆಗ್ರಹ
ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಸಿದ್ದತಾ ಸಮಾವೇಶಕ್ಕೆ ಚಾಲನೆ
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು: ಮುಖಂಡರ ಆಗ್ರಹ
ಕಲಬುರಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ನಗರದ ಕೋಠಾರಿ ಭವನದಲ್ಲಿ ಮಂಗಳವಾರ ನಡೆದ ಮುಷ್ಕರ ಸಿದ್ದತಾ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಜಯದೇವರಾಜೇ ಅರಸ್ ಅವರು, ರಾಜ್ಯ ರಸ್ತೆ ಸಾರಿಗೆ ನೌಕರರು ಹಲವು ವರ್ಷಗಳಿಂದ ವೇತನ ಪರಿಷ್ಕರಣೆ, ಹುದ್ದೆ ಭರ್ತಿ, ನಿವೃತ್ತಿ ಸೌಲಭ್ಯ ಸೇರಿದಂತೆ ಅನೇಕ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ನೌಕರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿಯದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್ (ಎಐಟಿಯುಸಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ವಿಜಯಭಾಸ್ಕರ್ ಡಿ.ಎ ಅವರು ಮಾತನಾಡಿ, ಸಾರಿಗೆ ನೌಕರರು ಕೋವಿಡ್ ಅವಧಿಯಲ್ಲೂ ಜೀವದ ಹಂಗು ತೊರೆದು ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. ಇಂತಹ ನೌಕರರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕಾಂ. ಎಚ್.ಎಸ್. ಮಂಜುನಾಥ ಮಾತನಾಡಿ, ಸಾರಿಗೆ ನೌಕರರ ಏಕತೆ ಇಂದಿನ ಅಗತ್ಯವಾಗಿದೆ. ಸರ್ಕಾರ ನೌಕರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಎನ್. ನಾರಾಯಣ ಸ್ವಾಮಿ ಮಾತನಾಡಿ, ನೌಕರರ ವೇತನ, ಭದ್ರತೆ ಹಾಗೂ ಸೇವಾ ಸೌಲಭ್ಯಗಳ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಎಚ್. ಅವರು ಮಾತನಾಡಿ, ನೌಕರರ ಹೋರಾಟವು ಯಾವುದೇ ವ್ಯಕ್ತಿಗತ ಹಿತಾಸಕ್ತಿಗಾಗಿ ಅಲ್ಲ; ಸಾರಿಗೆ ವ್ಯವಸ್ಥೆ ಮತ್ತು ನೌಕರರ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಚಂದ್ರಕಾಂತ ಗದ್ದಗಿ ಅವರು, ಸಾರಿಗೆ ನೌಕರರ ಹಕ್ಕುಗಳ ರಕ್ಷಣೆಗೆ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ಸರ್ಕಾರ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾಂ. ಎಚ್.ಡಿ. ರೇವಪ್ಪ, ಸಂಗಮನಾಥ ರಬಶೆಟ್ಟಿ, ಕಾಂ. ಸಿದ್ದಪ್ಪ ಪಾಲ್ಕಿ, ರಾಮು, ಭೀಮರಾವ್ ಯರಗೋಳ ಹಾಗೂ ಬಸವರಾಜ ಕಣ್ಣಿ, ಅಧ್ಯಕ್ಷ ಮಂಡಳಿಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಹೈಯ್ಯಾಳಕರ್, ಗಣಪತಿ ಗೋಳಾ, ಖಾಜಪ್ಪ ಕೋರಳ್ಳಿ ಹಾಗೂ ಸೂರ್ಯಕಾಂತ ಟೈಗರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಂಘಟನಾ ಕಾರ್ಯದರ್ಶಿ ಕಾಂ. ನಾಗೀಂದ್ರಪ್ಪ ಚವ್ಹಾಣ ಸ್ವಾಗತಿಸಿದರು. ವಿಠಲ್ ಭೀಮನ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ. ಡಲ್ಲು ವಂದನಾರ್ಪಣೆ ಸಲ್ಲಿಸಿದರು.
