ಮಾಡಿಯಾಳದಲ್ಲಿ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಮಾಡಿಯಾಳದಲ್ಲಿ  ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

 ಮಾಡಿಯಾಳದಲ್ಲಿ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಆಳಂದ ತಾಲೂಕು: ತಾಲೂಕಿನ ಸುಕ್ಷೇತ್ರ ಮಾಡಿಯಾಳ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವವು ಮೇ 9ರಿಂದ 18ರವರೆಗೆ ವೈಭವದಿಂದ ನಡೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಾತ್ರಾ ಸಮಿತಿಯ ಮುಖಂಡ ಗಂಗಾಧರ ಶಿರೂರ ತಿಳಿಸಿದರು.

ಮೇ 13ರಂದು ಸಂಜೆ 5 ಗಂಟೆಗೆ ಶ್ರೀ ಅಮೋಘಸಿದ್ದೇಶ್ವರ ಪಲ್ಲಕ್ಕಿ ಮಾಡಿಯಾಳ ಗ್ರಾಮದಿಂದ ಗಾಣಗಾಪುರದ ಕೂಡಲ ಸಂಗಮದತ್ತ ಹೊರಡಲಿದ್ದು, ಮೇ 14ರಂದು ಗಂಗಾಸ್ನಾನ ನೆರವೇರಲಿದೆ. ಮೇ 15ರಂದು ಪಲ್ಲಕ್ಕಿ ಮರಳಿ ಗ್ರಾಮಕ್ಕೆ ಆಗಮಿಸಿ ದೇವಸ್ಥಾನ ತಲುಪಲಿದೆ. ಮೇ 16ರಂದು ಅಮಾವಾಸ್ಯೆ ಪ್ರಯುಕ್ತ ರಾತ್ರಿ ಪೂರ್ತಿ ಗ್ರಾಮದ ಬೀದಿಗಳಲ್ಲಿ ಪಲ್ಲಕ್ಕಿ ಹಾಗೂ ದೇವರ ಮೂರ್ತಿ ಭವ್ಯ ಮೆರವಣಿಗೆ ನಡೆಯಲಿದೆ. ಮೇ 17ರಂದು ನಸುಕಿನ ಜಾವ ಪರಮಪೂಜ್ಯ ಶ್ರೀ ಪ್ರಭುರಾಯ ರೇವಪ್ಪ ಮುತ್ಯಾರವರಿಂದ ದೇವರ ಹೇಳಿಕೆ ನುಡಿ (ಅಮೃತವಾಣಿ) ನಡೆಯಲಿದೆ.

ಜಾತ್ರಾ ಅಂಗವಾಗಿ ಮೇ 9ರಿಂದ 15ರವರೆಗೆ ಒಂಬತ್ತು ದಿನಗಳ ಕಾಲ ಪ್ರತಿದಿನ ಸಂಜೆ 7ರಿಂದ ರಾತ್ರಿ 10ರವರೆಗೆ ಪೂಜ್ಯರ ಸಾನಿಧ್ಯದಲ್ಲಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಜೀವನ ಚರಿತ್ರೆ, ಮಹಾಪುರಾಣ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಗಳು ಜರುಗಲಿವೆ.

ಮೇ 15ರಂದು ಸಂಜೆ 7 ಗಂಟೆಗೆ ವಿಶೇಷ ಸನ್ಮಾನ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಅಶೋಕ ಗುತ್ತೇದಾರ, ವಿಠಲರಾವ ಪಾಟೀಲ, ವೀರಣ್ಣ ಮಂಗಾಣೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾದ ಗ್ರಾಮದ ನಂದಿನಿ ಕಲಶೇಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಧಿಕಾರಿಗಳು ಹಾಗೂ ಯೋಧರನ್ನು ಸನ್ಮಾನಿಸಲಾಗುವುದು.

ಮೇ 16ರಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 21 ಸಾಧಕರಿಗೆ “ಶ್ರೀ ಅಮೋಘ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ದೇವೇಂದ್ರ ಮರತುರ, ಜಗನ್ನಾಥ ಶೆಗಜಿ, ಸಿದ್ದರಾಮ ಪ್ಯಾಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಅದೇ ದಿನ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಎನ್.ಕೆ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ಮೇ 17ರಂದು ಸಂಜೆ 4 ಗಂಟೆಗೆ ಪೈಲ್ವಾನರಿಂದ ಕುಸ್ತಿ ಸ್ಪರ್ಧೆಗಳು ನಡೆಯಲಿದ್ದು, ಮೇ 18ರಂದು ಭೂತಾಳಸಿದ್ದೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

ಜಿಲ್ಲೆಯ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಬೇಕೆಂದು ಜಾತ್ರಾ ಸಮಿತಿಯವರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಕೌಲಗಿ, ಶಿವಯೋಗೇಪ್ಪಾ ಪೂಜಾರಿ, ಮುತ್ತಣ್ಣ ನಡಗೇರಿ, ಮಲಕಾರಿ ಪೂಜಾರಿ, ಶರಣಬಸಪ್ಪ ಕಲಶೇಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.