ಬೆಳೆ ವಿಮೆ ಪರಿಹಾರ ತಕ್ಷಣ ಬಿಡುಗಡೆಗೆ ಆಗ್ರಹ: ೭ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ತಡೆದು ಉಗ್ರ ಹೋರಾಟ ಎಚ್ಚರಿಕೆ
ಬೆಳೆ ವಿಮೆ ಪರಿಹಾರ ತಕ್ಷಣ ಬಿಡುಗಡೆಗೆ ಆಗ್ರಹ: ೭ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ತಡೆದು ಉಗ್ರ ಹೋರಾಟ ಎಚ್ಚರಿಕೆ
ಕಲಬುರಗಿ : ೨೦೨೫-೨೬ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಭೀಮಾ ಫಸಲ ಯೋಜನೆಯಡಿ ಬಾಕಿ ಇರುವ ಬೆಳೆ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಫಜಲಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಫಜಲಪುರ ತಾಲೂಕಿನ ಬೈರಾಮಡಗಿ, ಮದರಾ (ಬಿ), ಕೋಗನೂರ, ಗುಡೂರ, ಗೌರ (ಬಿ), ಚೌಡಾಪೂರ, ಬಂದರವಾಡ ಹಾಗೂ ಹಸರಗುಂಡಗಿ ಸೇರಿದಂತೆ ಒಟ್ಟು ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಇದುವರೆಗೆ ಬೆಳೆ ವಿಮೆ ಪರಿಹಾರ ಸಂಪೂರ್ಣವಾಗಿ ದೊರೆತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ವಿಶೇಷವಾಗಿ ಬೈರಾಮಡಗಿ, ಮದರಾ ಮತ್ತು ಕೋಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ "ಶೂನ್ಯ ಪರಿಹಾರ" ಎಂದು ದಾಖಲಾಗಿರುವುದು ರೈತರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
೨೦೨೫-೨೬ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದರೂ ಒಂದು ವರ್ಷ ಕಳೆದರೂ ಎರಡನೇ ಕಂತಿನ ಪರಿಹಾರ ಬಿಡುಗಡೆಯಾಗಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಬಾಕಿ ಇರುವ ಭೀಮಾ ಫಸಲ ಯೋಜನೆಯ ಬೆಳೆ ಪರಿಹಾರ ಧನವನ್ನು ಎಲ್ಲಾ ಅರ್ಹ ರೈತರಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪಗಳಿಗೆ ಕಾರಣರಾದ ಸಂಬAಧಪಟ್ಟ ಸರ್ವೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನೊಂದ ರೈತರಿಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಒಂದು ವೇಳೆ ಏಳು ದಿನಗಳೊಳಗೆ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಧನ ಬಿಡುಗಡೆ ಮಾಡದಿದ್ದರೆ ಅಫಜಲಪುರ ತಾಲೂಕಿನ ಅತನೂರ ಹೋಬಳಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯನ್ನು ತಡೆದು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾವಿರಾರು ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗುಂಡು ಪಾಟೀಲ್, ರಾಮಚಂದ್ರ ಪೊಲೀಸ್ ಪಾಟೀಲ್, ಸಂಗಯ್ಯ ಸ್ವಾಮಿ ಮಠ ಸಿದ್ದಣ್ಣ ಹಿರಾಪುರ್, ಶ್ಯಾಮಲಿಂಗ ಮೂಲಗಿ, ಶರಣಪ್ಪ ಮುಗಳಿ, ಗುರುಕಿರಣ್ ಮಾಸ್ಟರ್, ದತ್ತು ಜಮಶೇಟ್ಟಿ, ಜಗದೀಶ್ ಮೂಲಗಿ, ಗುರುಶಾಂತ್ ಹಿರಾಪುರ್, ಸಿದ್ದನಗೌಡ ಮೂಲಗಿ, ಗುರುಲಿಂಗಪ್ಪ ಕರೂರ್, ಶಿವಕುಮಾರ ಜಮಾದಾರ, ರೇವಣಸಿದ್ದ ಕುಡಕ್ಕಿ ಇದ್ದರು.

