ಸ್ವಾತಂತ್ರ್ಯಬಂದಾಗಿನಿಂದ ಇನ್ನು ವರೆಗೂ ಆಳಂದಕ್ಕೆ ಸಚಿವ ಸ್ಥಾನ ಮರೀಚಿಕೆ; ಮತ್ತೆ ಭಗ್ನಗೊಂಡ ಜನರ ನಿರೀಕ್ಷೆ
ಸ್ವಾತಂತ್ರ್ಯಬಂದಾಗಿನಿಂದ ಇನ್ನು ವರೆಗೂ
ಆಳಂದಕ್ಕೆ ಸಚಿವ ಸ್ಥಾನ ಮರೀಚಿಕೆ; ಮತ್ತೆ ಭಗ್ನಗೊಂಡ ಜನರ ನಿರೀಕ್ಷೆ
ಡಾ. ಅವಿನಾಶ ಎಸ್. ದೇವನೂರ
ಆಳಂದ: ಸ್ವಾತಂತ್ರ್ಯ ದೊರೆತು ಏಳು ದಶಕಗಳಿಗೂ ಅಧಿಕ ಕಾಲ ಕಳೆದರೂ ಆಳಂದ ವಿಧಾನಸಭೆ ಕ್ಷೇತ್ರಕ್ಕೆ ಯಾವುದೇ ಪಕ್ಷದ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯದಿರುವುದು ಕ್ಷೇತ್ರದ ಜನರಲ್ಲಿ ಮತ್ತೆ ತೀವ್ರ ನಿರಾಸೆ ಮೂಡಿಸಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ವೇಳೆ ಈ ಬಾರಿಯಾದರೂ ಆಳಂದ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ರಾದ ಬಿ.ಆರ್. ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆ ಕ್ಷೇತ್ರದ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಗಟ್ಟಿಯಾಗಿತ್ತು. ಆದರೆ ಸೋಮವಾರ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರ ಹೆಸರು ಕೈಬಿಟ್ಟಿರುವುದು ಆ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.
ಆಳಂದ ಕ್ಷೇತ್ರವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ರಾಜಕೀಯ ಕ್ಷೇತ್ರಗಳಲ್ಲಿ ಒಂದಾಗಿದ್ದರೂ, ಸಚಿವ ಸ್ಥಾನ ವಿಚಾರದಲ್ಲಿ ಮಾತ್ರ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ವಿವಿಧ ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡದಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬಿ.ಆರ್. ಪಾಟೀಲ್ ಅವರು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಆಡಳಿತಾತ್ಮಕ ಅನುಭವ, ಅಭಿವೃದ್ಧಿ ಪರ ನಿಲುವು ಹಾಗೂ ವಿಧಾನಸಭೆಯಲ್ಲಿ ಜನಪರ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಅವರ ಸಲಹೆಗಾರರಾಗಿ ಹಿಂದೆ ಉಪಸಭಾಪತಿಗಳಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಬಾರಿ ಸಚಿವ ಸ್ಥಾನ ಖಚಿತ ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಇತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಕಾಣಿಸದಿರುವುದು ಕಾಂಗ್ರೆಸ್ ಬೆಂಬಲಿಗರಿಗೆ ನಿರಾಸೆ ಉಂಟುಮಾಡಿದೆ.
ರಾಜ್ಯದ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನಕ್ಕೆ ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಆಳಂದ ಕ್ಷೇತ್ರಕ್ಕೆ ಮತ್ತೊಮ್ಮೆ ಅವಕಾಶ ಕೈತಪ್ಪಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿದ್ದರೆ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯಗಳು ಅವರ ಅಭಿಮಾನಿಗಳಲ್ಲಿ ವ್ಯಕ್ತವಾಗುತ್ತಿವೆ.
ಈ ಬೆಳವಣಿಗೆಯ ನಂತರ ಆಳಂದ ಕ್ಷೇತ್ರದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಹಾಗೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ. ಸಚಿವ ಸ್ಥಾನ ದೊರೆಯದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸ್ವಾತಂತ್ರ್ಯಾನಂತರ ಆಳಂದಕ್ಕೆ ಸಚಿವ ಸ್ಥಾನ ಎಂಬ ಕನಸು ಇನ್ನೂ ನನಸಾಗದಿರುವುದು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ನಿರಾಸೆಯ ಅಧ್ಯಾಯವಾಗಿ ದಾಖಲಾಗಿದೆ. ಜನರ ನಿರೀಕ್ಷೆ ಮತ್ತೆ ಭಗ್ನಗೊಂಡಿದೆ

