ಗೌರವ ಡಾಕ್ಟರೇಟ್ ಪದವಿಗೆ ಡಾ. ಪಿ ಜಿ ಆರ್ ಸಿಂಧ್ಯ ಅತ್ಯಂತ ಅರ್ಹ ವ್ಯಕ್ತಿ : ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಅವ್ವಾಜಿ
ಗೌರವ ಡಾಕ್ಟರೇಟ್ ಪದವಿಗೆ ಡಾ. ಪಿ ಜಿ ಆರ್ ಸಿಂಧ್ಯ ಅತ್ಯಂತ ಅರ್ಹ ವ್ಯಕ್ತಿ : ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಅವ್ವಾಜಿ
ಕಲಬುರಗಿ : ನಾಡಿನ ಮಕ್ಕಳು ಹಾಗೂ ಯುವಕರಲ್ಲಿ ಸೇವಾ ಮನೋಭಾವನೆ ಮೂಡಿಸುವ ಡಾ ಪಿ ಜಿ ಆರ್ ಸಿಂಧ್ಯ ಅವರ ಕಾರ್ಯ ಶ್ಲಾಘನೀಯವಾಗಿದ್ದೂ, ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಅತ್ಯಂತ ಸೂಕ್ತ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪ (ಅವ್ವಾಜಿ) ಬಣ್ಣಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯವು ಡಾ ಪಿ ಜಿ ಆರ್ ಸಿಂಧ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ಪ್ರಯುಕ್ತ ಗುಲಬರ್ಗಾ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಡಾ ಪಿ ಜಿ ಆರ್ ಸಿಂಧ್ಯ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಡಾ ಪಿ ಜಿ ಆರ್ ಸಿಂಧ್ಯ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯದ ಮುಖ್ಯ ಆಯುಕ್ತರಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ .
ರಾಜ್ಯದ ಮಂತ್ರಿಗಳಾಗಿದ್ದಾಗ ವಿವಿಧ ಇಲಾಖೆಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಅವ್ವಾಜಿ ನುಡಿದರು.
ಅಭಿನಂದನಾ ಸಮಾರಂಭದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತರು ಹಾಗೂ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿರುವ ಡಾ ಪಿ ಜಿ ಆರ್ ಸಿಂಧ್ಯ ಅವರು ಮಾತನಾಡಿ, ನಾನು ನಾಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ನನಗೆ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ನುಡಿದರು.
ಕಲ್ಯಾಣ ಕರ್ನಾಟಕದೊಂದಿಗೆ ನನಗೆ ಅವಿನಾಭಾವ ಸಂಬಂಧವಿದ್ದು, ಇಲ್ಲಿಯ ಜನರ ಪ್ರೀತಿ ಮರೆಯಲು ಸಾಧ್ಯವಿಲ್ಲ. ಈ ಭಾಗಕ್ಕೆ ಮುಂಬರುವ ದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಡಾ ಡಿ ಜಿ ಸಾಗರ ಮಾತನಾಡಿ, ಸರ್ಕಾರ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಸೂಚಿಸುವುದು ಒಂದೆಡೆಯಾದರೆ, 'ಗೌಡಾ' ಪದವಿ ಪಡೆದ ವ್ಯಕ್ತಿಗಳ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆಯಬಾರದು ಎಂದು ಕೋರ್ಟ್ ಹೇಳಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ ಶಶಿಕಾಂತ ಉಡಿಕೇರಿ ಮಾತನಾಡಿ, ವಿಶ್ವವಿದ್ಯಾಲಯಗಳು ನಾಡಿಗೆ ವಿಶೇಷ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ, ಗೌರವ ಡಾಕ್ಟರೇಟ್ ಪದವಿ ನೀಡುತ್ತಿರುವುದು, ಜನರು ಸಮಾಜದಲ್ಲಿ ಉತ್ಕೃಷ್ಟ ಮಟ್ಟದ ಸೇವಾ ಕಾರ್ಯ ಮಾಡಲು ಪ್ರೇರಣೆ ದೊರೆಯುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.
ನಾಡಿಗೆ ನಿಸ್ವಾರ್ಥ ಸೇವೆಯ ಮೂಲಕ ಹೆಸರು ಮಾಡಿದವರು ಡಾ ಪಿ ಜಿ ಆರ್ ಸಿಂಧ್ಯ ಎಂದು ಹೇಳಿದರು.
ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪ ಆಯುಕ್ತರಾದ ಸಿ ಬಿ ಪಾಟೀಲ್ ಓಕಳಿ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಸಿಂಡಿಕೇಟ್ ಸದಸ್ಯರಾದ ಎಸ್ ಪಿ ಸುಳ್ಳದ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಚೆನ್ನವೀರಯ್ಯ ಹೀರೆಮಠ ಸ್ವಾಗತಿಸಿದರು. ಆಶಾ ಹೆಗಡೆ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ರಾಜಕುಮಾರ್ ಮರಾಠೆ ವಂದಿಸಿದರು.
ಕುಲಸಚಿವ ಡಾ ರಮೇಶ್ ಲಂಡನಕರ್, ಕುಲಸಚಿವ (ಮೌಲ್ಯಮಾಪನ) ಡಾ ಲಿಂಗಣ್ಣ ಕಣ್ಣೂರ, ಡಾ ಹಣಮಂತ ಜಂಗೆ, ಸಿಂಡಿಕೇಟ್ ಸದಸ್ಯರಾದ, ಮಲ್ಲಣ್ಣ ಮಡಿವಾಳ, ಜಿಲ್ಲಾ ಕಾರ್ಯಕಾರಿ ಸದಸ್ಯ ಜೈ ಪ್ರಕಾಶ್ ಕಟ್ಟಿಮನಿ, ಅಮರೇಶ, ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿಗಳಾದ ಡಾ ಅಲ್ಲಮಪ್ರಭು ದೇಶಮುಖ, ಶರಣಬಸವೇಶ್ವರ ಸಂಸ್ಥಾನದ ಭವಾನಿ ಎಸ್ ಅಪ್ಪ, ಶಿವಾನಿ ಎಸ್ ಅಪ್ಪ, ನಾಗಣ್ಣ ಹೊನ್ನಳಿ ಲೇಖಕ ಪ್ರೊ ಯಶವಂತರಾಯ ಅಷ್ಠಗಿ, ಅಶುತೋಷ್ ಅಷ್ಠಗಿ, ಪ್ರಮೀಳಾ ಪಾಟೀಲ್ ಬಿಬ್ಬಳ್ಳಿ, ರಾಜು ಜೈನ್, ಸೇವಂತಾ ಚವಾಣ್, ಸಾವಿತ್ರಿ ಪಾಟೀಲ್, ಸುಮಂಗಲಾ ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಡಾ ಪಿ ಜಿ ಆರ್ ಸಿಂಧ್ಯ ಹಿತೈಷಿಗಳು , ಅಭಿಮಾನಿಗಳು ಉಪಸ್ಥಿತರಿದ್ದರು.
