“ಧ್ವನಿ ನಮ್ಮ ಅಸ್ತಿತ್ವದ ಗುರುತು” – ವಿರೇಂದ್ರ ವಾಲಿ
ಟೆಂಗಳಿ ಗ್ರಾಮದಲ್ಲಿ ವಿಶ್ವ ಧ್ವನಿ ದಿನಾಚರಣೆ ಆಚರಣೆ“ಧ್ವನಿ ನಮ್ಮ ಅಸ್ತಿತ್ವದ ಗುರುತು” – ವಿರೇಂದ್ರ ವಾಲಿ
ಕಲಬುರಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಭೀಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಏಪ್ರಿಲ್ 16ರಂದು ವಿಶ್ವ ಧ್ವನಿ ದಿನಾಚರಣೆಯನ್ನು ಅಂಡಗಿ ಮನೆತನದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ವಿರೇಂದ್ರ ವಾಲಿ, “ಧ್ವನಿ ನಮ್ಮ ಬದುಕಿನ ಗುರುತು ಮಾತ್ರವಲ್ಲ, ನಮ್ಮ ಅಸ್ತಿತ್ವದ ಪ್ರತೀಕವೂ ಆಗಿದೆ. ಈ ಭೂಮಿಗೆ ಬಂದ ಮೊದಲ ಕ್ಷಣದಲ್ಲೇ ಮನುಷ್ಯ ಧ್ವನಿಯ ಮೂಲಕ ತನ್ನ ಅಸ್ತಿತ್ವವನ್ನು ತಿಳಿಸುತ್ತಾನೆ. ಧ್ವನಿಯ ಮೂಲಕವೇ ಭಾವನೆ, ಪ್ರೀತಿ ಹಾಗೂ ಜ್ಞಾನವನ್ನು ವ್ಯಕ್ತಪಡಿಸಬಹುದು,” ಎಂದು ಹೇಳಿದರು.
ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿ, ಸಂಗೀತಗಾರರ ಸಾಧನೆ, ಶಿಕ್ಷಕರ ಬೋಧನಾ ಶೈಲಿ ಹಾಗೂ ಭಾಷಣಕಾರರ ವೈಖರಿ ಎಲ್ಲವೂ ಧ್ವನಿಯ ಮೇಲೆ ಅವಲಂಬಿತವಾಗಿವೆ. ಗ್ರಾಮೀಣ ಮಟ್ಟದಲ್ಲಿ ಧ್ವನಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾರ್ಮೋನಿಯಂ ಕಲಾವಿದ ವಿಶ್ವನಾಥ ಬಾಳದೆ ಹಾಗೂ ತಬಲಾ ಕಲಾವಿದ ಚಂದ್ರಶೇಖರ ಎಲೇರಿ ತಮ್ಮ ಸಂಗೀತ ಕಲೆಗಳ ಮೂಲಕ ಧ್ವನಿಯ ವೈವಿಧ್ಯತೆಯನ್ನು ಪ್ರದರ್ಶಿಸಿದರು.
ಕಾರ್ತಿಕೋತ್ಸವದ ಅಂಗವಾಗಿ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಬೆಳಿಗ್ಗೆ 6 ಗಂಟೆಗೆ ಜಾತ್ರೆಯ ನಿಮಿತ್ತ ಗ್ರಾಮದಿಂದ ತೆಗೆದುಕೊಂಡು ಹೋಗಿದ್ದ ತೇರಿನ ಕಳಸ, ಮಣಿ, ನಂದಿಕೋಲುಗಳು ಹಾಗೂ ಫಲ್ಲಕ್ಕಿಯನ್ನು ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಗ್ರಾಮಕ್ಕೆ ತರಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಕಮಿಟಿಯ ಸದಸ್ಯರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
