ಸಮ ಸಮಾನತೆಯ ವಿಚಾರದ ಖೇಳಗಿ ಮಠ : ಹೊಸಮನಿ
ಸಮ ಸಮಾನತೆಯ ವಿಚಾರದ ಖೇಳಗಿ ಮಠ : ಹೊಸಮನಿ
ಖೇಳಗಿ (ಬಿ)ಜಾತ್ರಾ ಮಹೋತ್ಸವದಲ್ಲಿ ಡಾ. ಸತೀಶ್ ಕುಮಾರ್ ಹೊಸಮನಿ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ
ಖೇಳಗಿ( ಬಿ )ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ
ಬಸವಕಲ್ಯಾಣ : ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೇಳಗಿ (ಬಿ) ಗ್ರಾಮದ ಜಗದ್ಗುರು ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ 98ನೇ ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ ಶ್ರದ್ಧಾಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಮಹತ್ವದ ಸೇವೆಯನ್ನು ಪರಿಗಣಿಸಿ ಡಾ. ಸತೀಶ್ ಕುಮಾರ್ ಹೊಸಮನಿ ಅವರಿಗೆ “ಶಿಕ್ಷಣ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಶ್ರೀಮಠದ ವತಿಯಿಂದ ಗೌರವಿಸಲಾಯಿತು.
ಡಾ. ಸತೀಶ್ ಕುಮಾರ್ ಹೊಸಮನಿ ಅವರು ತಮ್ಮ ಗ್ರಾಮದಲ್ಲಿ ಜನಿಸಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದ್ದು, ಗ್ರಂಥಾಲಯ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಪುಸ್ತಕಗಳನ್ನು ಓದುವಂತೆ ಹೊಸ ಕ್ರಾಂತಿಯನ್ನು ಆರಂಭಿಸಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಜಾರಿಗೆ ತರುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಶ್ರೀಮಠದಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಎಂದು ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಮ.ನಿ.ಪ್ರ.ಶಿವಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ಜಗದ್ಗುರು ಶಿವಲಿಂಗೇಶ್ವರ ವಿರಕ್ತ ಮಠವು ಜಾತಿ-ಮತ ಭೇದಗಳನ್ನು ಮರೆತು 12ನೇ ಶತಮಾನದ ಶರಣರ ಆಚಾರ-ವಿಚಾರಗಳನ್ನು ಅನುಸರಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯನ್ನು ಮಾಡುತ್ತಿದೆ ಎಂದು ಹೇಳಿದರು. ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣದ ಯೋಜನೆಗಳನ್ನು ರೂಪಿಸಿರುವ ಶ್ರೀಗಳ ಸರಳತೆ ಮತ್ತು ಸಜ್ಜನಿಕೆ ಪ್ರಶಂಸನೀಯವಾಗಿದ್ದು, 12ನೇ ಶತಮಾನದ ಮಹಾನ್ ಚಿಂತಕ ಬಸವಣ್ಣನವರ ಕನಸುಗಳನ್ನು ಸಾಕಾರಗೊಳಿಸುವ ದಾರಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಾತ್ರಾ ಮಹೋತ್ಸವದ ಅಂಗವಾಗಿ 11 ದಿನಗಳ ಕಾಲ ಶರಣರ ವಿಚಾರಗಳ ಕುರಿತು ಪ್ರವಚನಗಳು ನಡೆಯಿತು. ಹಾಗೂ ಭಕ್ತರಿಂದ ಶ್ರೀಗಳ ತುಲಾಭಾರ ನಡೆಯುತ್ತಿದೆ, ಆ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುವುದು ಎಂದು ಶ್ರೀಗಳು ಹೇಳಿದರು . ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದ ಭಕ್ತವೃಂದ ಹಾಗೂ ಗಣ್ಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
