ಬೇಸಿಗೆ ಶಿಬಿರ ಮಕ್ಕಳ ಮನೋವಿಕಾಸಕ್ಕೆ ಉತ್ತೇಜನ : ಡಾ. ಸದಾನಂದ ಪೆರ್ಲ

ಬೇಸಿಗೆ ಶಿಬಿರ ಮಕ್ಕಳ ಮನೋವಿಕಾಸಕ್ಕೆ ಉತ್ತೇಜನ :  ಡಾ. ಸದಾನಂದ ಪೆರ್ಲ

ಬೇಸಿಗೆ ಶಿಬಿರ ಮಕ್ಕಳ ಮನೋವಿಕಾಸಕ್ಕೆ ಉತ್ತೇಜನ : ಡಾ. ಸದಾನಂದ ಪೆರ್ಲ

ಹಿಗ್ಗಿನ ಬೇಸಿಗೆ ಶಿಬಿರಕ್ಕೆ ಗಿಡ ನೆಟ್ಟು ಚಾಲನೆ

ಕಲಬುರಗಿ : ಮಕ್ಕಳ ಮಾನಸಿಕ,ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿರುವ ಬೇಸಿಗೆ ಶಿಬಿರಗಳಿಂದ ಸಂಸ್ಕಾರ ಸಂಸ್ಕೃತಿಗಳೊಂದಿಗೆ ಉತ್ತಮ ಮಕ್ಕಳನ್ನು ನಿರ್ಮಾಣ ಮಾಡಿ ರಾಷ್ಟ್ರಕ್ಕೆ ನೀಡುವ ಸಂಕಲ್ಪ ಎಂದು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು 

     ಕಲಬುರಗಿಯ ಖ್ಯಾತ ಸಾಹಿತಿ ಹಾಗೂ ವಿದ್ಯಾನಿಧಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಹೊನಗುಂಟಿಕರ್ ಆಯೋಜನೆಯ ಹಿಗ್ಗಿನ ಬೇಸಿಗೆ ಶಿಬಿರವನ್ನು ಕಲಬುರಗಿಯ ಗೋದುತಾಯಿ ನಗರದ ಮಹೇಶ್ವರ ಮಂದಿರದ ಆವರಣದಲ್ಲಿ ಮಾ. 25ರಂದು ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ ನಮ್ಮ ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸದೆ ಅವರಿಗೆ ಪಠ್ಯೇತರ ಚಟುವಟಿಕೆ ಮತ್ತು ಅವರಲ್ಲಿ ಹುದುಗಿರುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಬಹುಮುಖಿ ಕ್ರಿಯಾ ಚಟುವಟಿಕೆಗಳಿಂದ ಸದೃಢರನ್ನಾಗಿಸುವ ಮನೋಬಲ ಹಾಗೂ ಶಾರೀರಿಕ ಗಟ್ಟಿತನವನ್ನು ಒದಗಿಸುವ ಬೇಸಿಗೆ ಶಿಬಿರಗಳು ಮಕ್ಕಳ ಪಾಲಿಗೆ ಅತ್ಯಂತ ಸಂತಸವನ್ನು ನೀಡುತ್ತದೆ. ಮೊಬೈಲ್, ಟಿವಿ ಗಳಿಂದ ಮಕ್ಕಳನ್ನು ದೂರವಿರಿಸಲು ಇಂತಹ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು ಪಾಲಕರು ವಾಣಿಜ್ಯ ದೃಷ್ಟಿಕೋನವಿಲ್ಲದೆ ನಡೆಸುವ ಶಿಬಿರಗಳಿಗೆ ಮಕ್ಕಳನ್ನು ಸೇರಿಸಿ ಅವರ ಪ್ರತಿಭೆ ಗಳನ್ನು ಪೋಷಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು. 

    ಮಾ. 25 ರಿಂದ ಏಪ್ರಿಲ್ 8ರವರೆಗೆ ಮಕ್ಕಳನ್ನು ಪಾಠದ ಸಜೆ ಇಲ್ಲದೆ ಆಟದ ಮಜಾ ದೊಂದಿಗೆ ಧಾರವಾಡದ ಶ್ರೀಕಾಂತ ನವಲಗಿರಿ ಹಾಗೂ ನೀನಾಸಂ ಪದವೀಧರ ಶ್ರೀನಿವಾಸ ದೋರನಹಳ್ಳಿ ಇವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಬಹುಮುಖಿ ಆಯಾಮಗಳಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಶಿಬಿರದ ಆಯೋಜಕರಾದ ಸಂಧ್ಯಾ ಹೊನಗುಂಟಿಕರ್ ಪ್ರಾಸ್ತಾವಿಕವಾಗಿ ಹೇಳಿದರು. ಗೋದುತಾಯಿ ನಗರದ ಪ್ರಕೃತಿಯ ಮಡಿಲಲ್ಲಿ ಶಿಬಿರ ಏರ್ಪಡಿಸಿರುವುದು ಮಕ್ಕಳಿಗೆ ಆಟ ಪಾಠ ಕೇಳಲು ಸೂಕ್ತ ಎಂದು ಮಹೇಶ್ವರ ಮಂದಿರದ ಉಸ್ತುವಾರಿ ಚಂದ್ರಶೇಖರ್ ಸೂಗೂರು ಮಠ ಹೇಳಿದರು. ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ಸಂಸ್ಕೃತಿ ನೀಡಿದಲ್ಲಿ ಶಿವಾಜಿಯಂತಹ ಮಕ್ಕಳನ್ನು ಪಡೆಯಲು ಸಾಧ್ಯ ಹಾಗೂ ಮೊಬೈಲ್ ಚಟದಿಂದ ದೂರವಿರಿಸಲು ಬೇಸಿಗೆ ಶಿಬಿರ ಸಹಾಯಕಾರಿಯಾಗಲಿ ಎಂದು ಅಧ್ಯಕ್ಷತೆ ವಹಿಸಿದ ಗೋದುತಾಯಿ ನಗರ ಬಡಾವಣೆಯ ಮುಖ್ಯಸ್ಥರಾದ ಮಲ್ಲಿಕಾರ್ಜುನ ಪಾಟೀಲ್ ಹೇಳಿದರು.

 ಕಾರ್ಯಕ್ರಮದಲ್ಲಿ ರಂಗಾಯಣ ಮಾಜಿ ನಿರ್ದೇಶಕರಾದ ಪ್ರಭಾಕರ ಜೋಷಿ, ಉಪನ್ಯಾಸಕ ಆನಂದ ಸಿ ಎಸ್, ಶ್ರೀಮತಿ ಶಾಂತಾ ಪಸ್ತಾಪುರೆ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಸಿತಾರಾ ಹೊನಗುಂಟಿಕರ್, ವಾಣಿ ಕುಲಕರ್ಣಿ ಶಾರದಾ ಮೇಸ್ತ್ರಿ, ಕಾವ್ಯ ಕುಲಕರ್ಣಿ, ಸುನಿತಾ ರಾವ್, ಶೀತಲ್ ದಮ್ಮೂರ ಕರ್,ಅಜಯ್ ಡೋಲೆ ಇದ್ದರು.ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.