ಡಿಕೆ ಪರ ನಿಂತವರ ವಿರುದ್ಧ ಸಿಎಂ ಟಾರ್ಗೆಟ್ : ಡಾ.ಪ್ರಣವಾನಂದ ಶ್ರೀ ಆರೋಪ
ಡಿಕೆ ಪರ ನಿಂತವರ ವಿರುದ್ಧ ಸಿಎಂ ಟಾರ್ಗೆಟ್ : ಡಾ.ಪ್ರಣವಾನಂದ ಶ್ರೀ ಆರೋಪ
*ಅತಿ ಹಿಂದುಳಿದವರ ನಿಯೋಗಕ್ಕೆ ಉಪಮುಖ್ಯಮಂತ್ರಿ ಭರಪೂರ ಭರವಸೆ*
ಕಲಬುರಗಿ : ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಪರವಾಗಿರುವವರನ್ನು ಗುರುತಿಸಿ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಲಬುರಗಿ ಚಿತ್ತಾಪುರ ತಾಲೂಕು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ನೇರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾ. 21ರಂದು ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಯವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಸ್ವಗೃಹದಲ್ಲಿ ಭೇಟಿಯಾದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಇತ್ತೀಚಿಗೆ ಡಿಕೆ ಅವರನ್ನು ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಜೊತೆ ಭೇಟಿಯಾಗಿ ಸಮುದಾಯದ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು.ಇದರಿಂದ ಸಿಎಂ ಸಿದ್ದರಾಮಯ್ಯ ಅವರು ಅತಿ ಹಿಂದುಳಿದ ಸ್ವಾಮೀಜಿಗಳನ್ನು ಹಾಗೂ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅತಿ ಹಿಂದುಳಿದ ವರ್ಗಗಳಿಗೆ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಲಿಲ್ಲ . ರಾಜ್ಯಾದ್ಯಂತ 700 ಕೀ . ಮೀ. ಪಾದಯಾತ್ರೆ ಮಾಡಿ ಈಡಿಗ, ಬಿಲ್ಲವರ ಬೇಡಿಕೆಗಳಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ನಿರಶನ ಮಾಡಿದ ಹೋರಾಟಗಾರರೊಂದಿಗೆ ಸಂಧಾನ ನಡೆಸಲು ಸಚಿವ ಶಿವರಾಜ್ ತಂಗಡಿ ಅವರನ್ನು ಕಳುಹಿಸಿ ಚರ್ಚಿಸಿ ಮುಷ್ಕರ ಹಿಂತೆ ತೆಗೆದುಕೊಳ್ಳುವಂತೆ ಮಾಡಿದ್ದರು. ಆದರೆ ಮುಖ್ಯಮಂತ್ರಿಗಳು ನಂತರ ಸೌಜನ್ಯಕ್ಕಾದರೂ ಭೇಟಿಗೆ ಅವಕಾಶ ಕೊಡದೆ ಬಜೆಟ್ಟಿನಲ್ಲಿ ಅತಿ ಹಿಂದುಳಿದ ಸಮುದಾಯದ ನಿಗಮಗಳಿಗೆ ಅನುದಾನ ನೀಡದೆ ಅನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಒತ್ತಾಯಿಸುತ್ತಿಲ್ಲ. ಹೈಕಮಾಂಡ್ ಸಮ್ಮುಖದಲ್ಲಿ ಎರಡು ವರ್ಷಗಳ ಸ್ಥಾನ ಹಂಚಿಕೆ ಪ್ರಕಾರ ಡಿಕೆ ಅವರಿಗೆ ಸ್ಥಾನ ಸಿಗಲಿ ಎಂದಷ್ಟೇ ಹೇಳಿದರೂ ಸಿಎಂ ನಮ್ಮೆಲ್ಲರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಡಿಕೆ ಪಕ್ಷಕ್ಕಾಗಿ ಮಾಡಿದ ತ್ಯಾಗ ಹಾಗೂ ಅಹರ್ನಿಶಿ ದುಡಿಮೆಯನ್ನು ಹೈಕಮಾಂಡ್ ಗೌರವಿಸಬೇಕು. ಅದಕ್ಕಾಗಿ ಒಂದು ವಾರದಲ್ಲಿ ಕಾಂಗ್ರೆಸ್ಸಿನ ಹೈಕಮಾಂಡ್ ಭೇಟಿ ಮಾಡಲು ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗ ದೆಹಲಿಗೆ ತೆರಳಲ್ಲಿದ್ದು ಕೆ. ಸಿ ವೇಣುಗೋಪಾಲ್ ಜೊತೆ ಚರ್ಚಿಸಲು ಈಗಾಗಲೇ ದೂರವಾಣಿ ಮೂಲಕ ಮಾತನಾಡಿ ನಿರ್ಧರಿಸಲಾಗಿದೆ ಎಂದರು.
*ಡಿಕೆ ಭರಪೂರ ಭರವಸೆ :*
ಅತಿ ಹಿಂದುಳಿದ ಸ್ವಾಮೀಜಿಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದು ಅತಿ ಹಿಂದುಳಿದ ಸ್ವಾಮೀಜಿಗಳಿಗೆ ಬೆಂಗಳೂರಿನಲ್ಲಿ ಶೀಘ್ರ ನಿವೇಶನ ನೀಡಿ ಗುರು ಮಠ ನಿರ್ಮಾಣ ಕೆಲಸ ಸಕ್ರಿಯಗೊಳಿಸಲಾಗುವುದು. ಮೇ ತಿಂಗಳಿನಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ನೇತೃತ್ವದ ಬೃಹತ್ ಸಮಾವೇಶ ನಡೆಸಲು ಪೂರ್ಣ ಸಹಕಾರ ನೀಡಲಾಗುವುದು .ಪೂರ್ವಸಿದ್ಧತೆ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚನೆ ನೀಡಿ ಭರವಸೆ ಎಲ್ಲ ನೀಡಿದ್ದಾರೆ.
ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಬಹುದಿನಗಳ ಬೇಡಿಕೆಯಂತೆ ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಪ್ರತಿಷ್ಠಾಪನೆಗೆ ನಿವೇಶನ ನೀಡಲು ಒಪ್ಪಿದ್ದು ಕೂಡಲೇ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಸಂಪುಟ ಪುನಾರಚನೆಯ ವೇಳೆ ಬೇಳೂರು ಗೋಪಾಲಕೃಷ್ಣ ಅವರಿಗೆ ಈಡಿಗ ಕೋಟಾದಲ್ಲಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು. ನಿಯೋಗದಲ್ಲಿ ಸಮುದಾಯದ ಜಗದ್ಗುರು ಹಾಗೂ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಚಿತ್ತಾಪುರ ರಾಂಪುರ ಹಳ್ಳಿಯ ಭಗೀರಥಾನಂದ ಸ್ವಾಮೀಜಿ, ಕುಂಬಾರ ಸಮುದಾಯದ ಜಗದ್ಗುರು ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಚಿತ್ರದುರ್ಗ ಹಾಗೂ ಶಿವಸಿಂಪಿ ಸಮುದಾಯದ ಮಂದಾರ ಮಠದ ಶ್ರೀ ಮಹಾಂತ ಮಹಾಸ್ವಾಮಿಜಿ ಬಾಗಲಕೋಟೆ ಜೊತೆಗಿದ್ದರು.
