“ಸೂಪರ್ ಕಂಪ್ಯೂಟರ್‌ಗಳು ಶಿಕ್ಷಕರ ಪರ್ಯಾಯವಲ್ಲ” : ಡಾ. ಪಂಡಿತ ಬೆಳಮಗಿ
“ಸೂಪರ್ ಕಂಪ್ಯೂಟರ್‌ಗಳು ಶಿಕ್ಷಕರ ಪರ್ಯಾಯವಲ್ಲ” : ಡಾ. ಪಂಡಿತ ಬೆಳಮಗಿ
ಕಲಬುರಗಿ: ಇಂದಿನ ವೇಗವಾಗಿ ಬದಲಾಗುತ್ತಿರುವ ಸಂಶೋಧನೆ ಮತ್ತು ತಂತ್ರಜ್ಞಾನ ಶಿಕ್ಷಣ ಹಾಗೂ ದೈನಂದಿನ ಜೀವನದ ಪ್ರಮುಖ ಭಾಗವಾಗಿದ್ದು, ಡಿಜಿಟಲ್ ತರಗತಿಗಳು, ಕೃತಕ ಬುದ್ಧಿಮತ್ತೆ, ಆನ್‌ಲೈನ್ ಕಲಿಕಾ ವೇದಿಕೆಗಳು ಸೇರಿದಂತೆ ವಿವಿಧ ತಂತ್ರಜ್ಞಾನ ಸಾಧನಗಳು ಕಲಿಕೆಯನ್ನು ವೇಗವಾಗಿ ಮತ್ತು ಸುಲಭಗೊಳಿಸಿವೆ. ಆದರೆ ಯಾವುದೇ ಸೂಪರ್ ಕಂಪ್ಯೂಟರ್‌ಗಳು ಶಿಕ್ಷಕರ ಪರ್ಯಾಯವಾಗಲಾರವು ಎಂದು ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಕಲಬುರಗಿಯ ಜಂಟಿ ನಿರ್ದೇಶಕ ಡಾ. ಪಂಡಿತ ಬೆಳಮಗಿ ಹೇಳಿದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿಯಲ್ಲಿ 2026-27ನೇ ಸಾಲಿಗೆ ಪ್ರವೇಶ ಪಡೆದ ಬಿ.ಎ., ಬಿ.ಎಸ್ಸಿ. ಹಾಗೂ ಬಿ.ಕಾಂ. ವಿದ್ಯಾರ್ಥಿನಿಯರಿಗಾಗಿ ಆಗಸ್ಟ್ 29ರಂದು ಆಯೋಜಿಸಿದ್ದ “ಯುವಸಿರಿ–2026” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಕೇವಲ ಮಾಹಿತಿಯನ್ನು ನೀಡುವವರಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳ ವೈಯಕ್ತಿಕ ಅಗತ್ಯಗಳನ್ನು ಅರ್ಥಮಾಡಿಕೊಂಡು ಮಾರ್ಗದರ್ಶನ ನೀಡುವುದು, ಕಷ್ಟದ ಸಂದರ್ಭದಲ್ಲಿ ಪ್ರೇರೇಪಿಸುವುದು, ಶಿಸ್ತು, ಮೌಲ್ಯಗಳು, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವವನ್ನು ಬೆಳೆಸುವುದು ಶಿಕ್ಷಕರ ವಿಶೇಷ ಜವಾಬ್ದಾರಿಯಾಗಿದೆ ಎಂದರು.
ತಂತ್ರಜ್ಞಾನ ಮಾಹಿತಿ ಒದಗಿಸಬಹುದು. ಆದರೆ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಮಾನವೀಯ ಸಂಬಂಧಕ್ಕೆ ಪರ್ಯಾಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಂತ್ರಜ್ಞಾನದ ಜೊತೆಗೆ ಶಿಕ್ಷಣದ ಹಾಗೂ ಜೀವನದ ಮೌಲ್ಯಗಳಿಗೆ ಮಹತ್ವ ನೀಡಬೇಕು. ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಜ್ಞಾನ ಸಂಪಾದಿಸುವುದರೊಂದಿಗೆ ಶ್ರಮ, ಶಿಸ್ತು, ಗುರುಗಳಿಗೆ ಗೌರವ ಹಾಗೂ ಕಲಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ನಿರಂತರ ಪರಿಶ್ರಮವು ಅವರಿಗೆ ಮಾತ್ರವಲ್ಲದೆ ಕಾಲೇಜು, ಗುರುಗಳು, ಪಾಲಕರು ಹಾಗೂ ಸಮಾಜಕ್ಕೂ ಹೆಮ್ಮೆ ತರುತ್ತದೆ ಎಂದು ಹೇಳಿದರು.
ಮಹಾವಿದ್ಯಾಲಯದ ನಿವೃತ್ತ ಉಪಪ್ರಾಚಾರ್ಯೆ ಪ್ರೊ. ವೀಣಾ ಹೊನುಗುಂಟಿಕರ ಮಾತನಾಡಿ, ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಕಲಿತುಕೊಂಡಿದ್ದಾರೆ. ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಮುನ್ನಡೆದು ಪರಿಶ್ರಮಿಸಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು. ವಚನಗಾಯನದ ಮೂಲಕ ವಿದ್ಯಾರ್ಥಿನಿಯರನ್ನು ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಮಾತನಾಡಿ, ಯುವಜನತೆ ದೇಶದ ಶಕ್ತಿ, ಭವಿಷ್ಯದ ಆಶಾಕಿರಣ ಹಾಗೂ ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿಯಾಗಿದ್ದಾರೆ. ಅವರಲ್ಲಿರುವ ಪ್ರತಿಭೆ, ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
“ಯುವಸಿರಿ–2026” ಕೇವಲ ಒಂದು ಕಾರ್ಯಕ್ರಮವಲ್ಲ; ವಿದ್ಯಾರ್ಥಿಗಳ ಪ್ರತಿಭೆ, ಸಾಮರ್ಥ್ಯ, ಸಂಸ್ಕೃತಿ ಹಾಗೂ ಸೃಜನಶೀಲತೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ. ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿಯೂ ವಿದ್ಯಾರ್ಥಿಗಳು ತಮ್ಮನ್ನು ತಾವು ಬೆಳೆಸಿಕೊಳ್ಳಬೇಕು. “ಕನಸು ಕಾಣಿರಿ, ಗುರಿ ನಿಗದಿಪಡಿಸಿಕೊಳ್ಳಿರಿ, ನಿರಂತರ ಪರಿಶ್ರಮದಿಂದ ಅದನ್ನು ಸಾಧಿಸಿರಿ” ಎಂಬ ಸಂದೇಶವನ್ನು ಯುವಜನತೆ ಸದಾ ಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳು, ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಾಳಜಿಯೂ ಅಗತ್ಯ. ವಿದ್ಯಾರ್ಥಿಗಳು ಉತ್ತಮ ವೃತ್ತಿಪರರಾಗಿ ಮಾತ್ರವಲ್ಲದೆ ಉತ್ತಮ ನಾಗರಿಕರಾಗಿಯೂ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀಮತಿ ರೇಖಾ ಪಾಟೀಲ ಸ್ವಾಗತಿಸಿದರು. ಮಹಾವಿದ್ಯಾಲಯದ ನ್ಯಾಕ್ ಸಂಯೋಜಕ ಡಾ. ಮೋಹನರಾಜ ಪತ್ತಾರ ವೇದಿಕೆಯ ಮೇಲಿದ್ದ ಗಣ್ಯರನ್ನು ಪರಿಚಯಿಸಿದರು. ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಕಲಬುರಗಿಯ ಸಹಾಯಕ ನಿರ್ದೇಶಕ ರಾಜೇಂದ್ರ ಶಿಂಧೆ, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಗಳಾದ ಕುಮಾರಿ ಪ್ರಿಯಾ ಮತ್ತು ಕುಮಾರಿ ಶ್ವೇತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಸೂಕ್ಷ್ಮಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶಿಲ್ಪಾ ಬಂದ್ರಾಡ್ ವಂದಿಸಿದರು.
ನಂತರ ವಿದ್ಯಾರ್ಥಿನಿಯರು ಸಂಗೀತ, ನೃತ್ಯ ಹಾಗೂ ನಾಟಕಗಳ ಮೂಲಕ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

