ಮಾನವ ಕುಲಕ್ಕೆ ಸನ್ಮಾರ್ಗವನ್ನು ತೋರಿದ ಶ್ರೇಷ್ಠ ಶರಣ ದೇವರ ದಾಸಿಮಯ್ಯ : ಡಾ.ಕರುಣಾ ಜಮದರಖಾನಿ
ಮಾನವ ಕುಲಕ್ಕೆ ಸನ್ಮಾರ್ಗವನ್ನು ತೋರಿದ ಶ್ರೇಷ್ಠ ಶರಣ ದೇವರ ದಾಸಿಮಯ್ಯ : ಡಾ.ಕರುಣಾ ಜಮದರಖಾನಿ
ಕಲಬುರಗಿ : ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ಬಸವಾದಿ ಶರಣರ ವಚನಗಳು ಸಕಾರಾತ್ಮಕ ಬದಲಾವಣೆಗೆ ರಾಜಮಾರ್ಗ ಎಂಬುದು ಇದರಿಂದ ಸಾಬೀತಾಗುತ್ತದೆ ಪ್ರಾಧ್ಯಾಪಕಿ ಡಾ. ಕರುಣಾ ಜಮದರಖಾನಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಣ್ಣ ಬಸವಣ್ಣ, ದೇವರದಾಸಿಮಯ್ಯ ಆದಿಯಾಗಿ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ಜಯಂತಿ ಆಚರಿಸುವ ಮೂಲಕ ಅವರ ಬದುಕಿನ ಅನೇಕ ಮಜಲುಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸಮಾಜಕ್ಕೆ ಇಂಥಹ ಮಹಾನ ಶರಣರ ಮಾರ್ಗದರ್ಶನ ಸಿಗಲಿ ಎಂಬ ಆಶಯದಿಂದ ರಾಜ್ಯ ಸರಕಾರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮೈಂದ್ರಗಿಯ ಸಿದ್ದಾಶ್ರಮದ ವಿರಕ್ತ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಡಬರಾಬಾದಿನ ಮಠದ ಅಭಿನವ ಶ್ರೀ ರೇವಣಸಿದ್ದ ಶ್ರೀಗಳು ಸಾನಿಧ್ಯ ವಹಿಸಿದ್ದರು. ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಕೆಕೆಆರಟಿಸಿಯ ಅಧ್ಯಕ್ಷರಾದ ಶ್ರೀ ಅರುಣ ಕುಮಾರ ಪಾಟೀಲ ರಾಜ್ಯ ನೇಕಾರ ಸಮುದಾಯಗಳ ಸಂಸ್ಥಾಪಕ ಎಂ.ಡಿ ಲಕ್ಷ್ಮೀನಾರಾಯಣ ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ ಶಿವ ಪ್ರಭು ಹಿರೇಮಠ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಯುವ ಮುಖಂಡ ವಿನೋದಕುಮಾರ ಜನೆವರಿ ಸೇರಿದಂತೆ ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಶಿವರಾಜ ಅಂಡಗಿ ನಿರೂಪಿಸಿದರು. ದೇವರ ದಾಸಿಮಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಆರಂಭವಾಯಿತು. ಹೋಳಿಕಟ್ಟಾ, ಸರಾಫ್ ಬಜಾರ್, ಕಪಡಾ ಬಜಾರ್, ಸೂಪರ್ ಮಾರ್ಕೆಟ್, ಜಗತ್ ವೃತ್ತದ ಮೂಲಕ ರಂಗಮಂದಿರದವರೆಗೂ ಭವ್ಯ ಮೆರವಣಿಗೆ ನಡೆಯಿತು.
ಸಮಾಜದ ನೂರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
