ಕಲಬುರಗಿ:ಮುದನೂರು ದೇವರ ದಾಸಿಮಯ್ಯ ಪವಾಡ ಇಂದು ಕೂಡ ಜೀವಂತ – ಶಾಸಕ ಅಲ್ಲಮಪ್ರಭು ಪಾಟೀಲ
ಮುದನೂರು: ದೇವರ ದಾಸಿಮಯ್ಯ ಪವಾಡ ಇಂದು ಕೂಡ ಜೀವಂತ – ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ: ಮುದನೂರಿನಲ್ಲಿ ಏಳು ತೀರ್ಥಗಳಿಂದ ನಿರಂತರವಾಗಿ ಪುಟಿದೇಳುವ ನೀರು ಬರಗಾಲದಲ್ಲೂ ಬತ್ತದೇ ಹರಿಯುತ್ತಿರುವುದು ದೇವರ ದಾಸಿಮಯ್ಯ ಅವರ ಪವಾಡಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ 1047 ನೇ ಉತ್ಸವ ಸಮಿತಿಯ ಸಹಕಾರ ದಿಂದ ಸೋಮವಾರ ಆಯೋಜಿಸಲಾದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ, ಸರಕಾದ ವತಿಯಿಂದ ಶ್ರೀಮತಿ ಜಗದೀಶ್ವರಿ ನಾಸಿ ಹಾಗೂ ಶಿವಪ್ರಭು ಹಿರೇಮಠ ರವರ ಉಪಸ್ಥಿತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ದಾಸಿಮಯ್ಯ ಅವರು ಅಪ್ಪಟ ಶಿವಭಕ್ತರಾಗಿದ್ದು, ಭೀಕರ ಬರಗಾಲದ ಸಮಯದಲ್ಲೂ ದಾಸೋಹ ನಡೆಸಲು ಮಾಡಿದ ಪ್ರಯತ್ನಗಳು ಅವರ ಜೀವನ ಚರಿತ್ರೆಯಲ್ಲಿ ಕಾಣಿಸುತ್ತವೆ. ಸರಳ ಕನ್ನಡದಲ್ಲಿ ಗಹನ ತತ್ವಗಳನ್ನು ವಚನಗಳ ಮೂಲಕ ಸಾಮಾನ್ಯ ಜನತೆಗೆ ಮುಟ್ಟಿಸಿದ ಮಹಾನ್ ಸಂತರು ಅವರು. ಇಂತಹ ಪವಾಡ ಪುರುಷರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ ,ಹಿಂದಿನ ಕಾಲದಲ್ಲಿ ಬೈರಾಮಡಗಿ ಸೇರಿದಂತೆ ಹಲವೆಡೆ ಕೈಮಗ್ಗದಿಂದ ನೂಲಿನ ಉದ್ಯಮ ವ್ಯಾಪಕವಾಗಿತ್ತು. ಈಗ ಯಂತ್ರೋಪಕರಣಗಳ ಬಳಕೆಯಿಂದ ಈ ವೃತ್ತಿ ಕುಗ್ಗಿದರೂ, ಜನರು ಶಿಕ್ಷಣದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದ್ಯ ವಚನಕಾರ ದಾಸಿಮಯ್ಯನವರ ವಚನಗಳ ಆದರ್ಶದಂತೆ ಬಸವಾದಿ ಶರಣರು ಅಳವಡಿಸಿಕೊಂಡ ರೀತಿಯಲ್ಲಿ, ಸಮಾಜಗಳು ಸಂಘಟಿತವಾಗಿ ಶಕ್ತಿಯುತವಾಗಬೇಕು ಎಂದು ಅಭಿಪ್ರಾಯಪಟ್ಟರು.
ಮೈಂದರಗಿಯ ಸಿದ್ಧಾಶ್ರಮ ವಿರಕ್ತ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದಾಸಿಮಯ್ಯ ಅವರು ರಚಿಸಿದ 179 ವಚನಗಳು 12ನೇ ಶತಮಾನದ ಶರಣರ ಬದುಕಿಗೆ ದಿಕ್ಕು ತೋರಿದವು. “ಭಕ್ತಿ ಹೇಗೆ ಮಾಡಬೇಕು ಎಂದರೆ ದಾಸಿಮಯ್ಯರಂತೆ ಮಾಡಬೇಕು” ಎಂಬುದು ಬಸವಾದಿ ಶರಣರ ಅಭಿಪ್ರಾಯವಾಗಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಎಂ.ಡಿ. ಲಕ್ಷ್ಮೀನಾರಾಯಣ, ಅನನ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾ ಜಮದಾರಖಾನಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ, ಎಮ್. ಡಿ. ಲಕ್ಷ್ಮೀನಾರಾಯಣ ಮತ್ತು ಶ್ರೀಮತಿ ರುಕ್ಕಿಣಿ ಗಣೇಶ ಸಂಗಾ ಅವರಿಗೆ “ನೇಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ವಿವಿಧ ಎಂಟು ಸಮಾಜಗಳ ಮಂದಿಗೆ ಶ್ರೀ ದೇವರ ದಾಸಿಮಯ್ಯ, ನೇಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಡಬರಾಬಾದ್‌ನಲ್ಲಿರುವ ದೇವರ ದಾಸಿಮಯ್ಯ ಹಾಗೂ ಸಿದ್ದಾರೂಢ ಮಠದ ಪ್ರತಿನಿಧಿಗಳು, ಶ್ರೀ ಅಭಿನವ ರೇವಣಸಿದ್ದ ಪಟ್ಟದೇವರು, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹಿರೇಮಠ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರದೀಪ ಸಂಗಾ, ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್ ಯಳಸಂಗಿ, ಗೌರವಅಧ್ಯಕ್ಷ ಚಂದ್ರಶೇಖರ ಸುಲ್ತಾನಪುರ, ಜಯಂತಿಯ ಪ್ರಚಾರ ಸಮಿತಿ ಅಧ್ಯಕ್ಷ ವಿನೋದಕುಮಾರ್ ಜೆನವೇರಿ , ಶಿವಲಿಂಗಪ್ಪ ಅಷ್ಠಗಿ, ಚಂದ್ರಶೇಖರ್ ಮ್ಯಾಳಗಿ, ಶ್ರೀ ನೀವಾಸ ಬಲಪೂರ, ಡಾ. ಚನ್ನಾ ಬಸವರಾಜ, ಶರಣಪ್ರಸಾದ ಜೆನವೇರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೂಪಣೆ ಶಿವರಾಜ ಅಂಡಗಿ ಯವರು ಮಾಡಿದರು ಕೊನೆಯಲ್ಲಿ ಉತ್ಸವ ಸಮಿತಿಯ ಕಾರ್ಯದರ್ಶಿ ಹಾಗೂ ಶಿಕ್ಷಕ ಕುಶಾಲ ಯಡ್ ವಳ್ಳಿ ವಂದಿಸಿದರು. ನಂತರ, ಆನೆ ಅಬ್ಬಾರಿ ಮೇಲೆ ವಚನ ಸಾಹಿತ್ಯದ ಪುಸ್ತಕ ಗಳೊಂದಿಗೆ ಸಾಂಸ್ಕೃತಿಕ ಭವ್ಯ ಮೆರವಣಿಗೆ ಜರುಗಿತು. ನೇಕಾರ ಮಹಿಳಾ ಸಮಿತಿ ವತಿಯಿಂದ ಆಕರ್ಷಕ ಲೇಜಿಮ್ ನುರ್ತ್ಯ ಜರುಗಿತು.
