ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮಾಜದಿಂದ ,13 ರಂದು ಬೃಹತ್ ಹೋರಾಟ

ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮಾಜದಿಂದ ,13 ರಂದು ಬೃಹತ್ ಹೋರಾಟ

ಕಲಬುರಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣದ ಕುರಿತು ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಬಂಜಾರ ಸಮಾಜದ ವತಿಯಿಂದ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ 2025ರ ಆಗಸ್ಟ್ 19ರಿಂದ 2026ರ ಮೇ 13ರವರೆಗೆ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಆದರೆ ಈ ನಿರ್ಧಾರಗಳು ಕಾನೂನಾತ್ಮಕ ಪ್ರಕ್ರಿಯೆಗಿಂತ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ ಎಂಬ ಅನುಮಾನ ಮೂಡಿದೆ ಎಂದು ಹೇಳಿದರು.

2026ರ ಫೆಬ್ರವರಿ 27ರಂದು ವರ್ಗೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವ ನಿರ್ಧಾರ ಪ್ರಕಟಿಸಲಾಗಿತ್ತು. ಪ್ರಸ್ತುತ ಒಳ ಮೀಸಲಾತಿ ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆ ಪ್ರಶ್ನಿಸಿ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ. ಅಲ್ಲದೆ, ಡಬ್ಲ್ಯು.ಪಿ. ನಂ.23399/2026ರಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವುದು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ವಿಧಾನಸಭೆಯ ಮಳೆಗಾಲ ಅಧಿವೇಶನದಲ್ಲಿ ಬಂಜಾರ, ಬೋವಿ, ಕೊರಚ ಹಾಗೂ ಕೊರಮ ಸಮುದಾಯಗಳ ಪರವಾಗಿ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರದ ಹಠದಿಂದ ಬಂಜಾರ ಸಮುದಾಯಕ್ಕೆ ಅನ್ಯಾಯಮಾಜಿ ಸಚಿವ ಚೌಹಾಣ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಹಠದಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

 ಈಗಾಗಲೇ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಸೀಟುಗಳು ದೊರೆಯುತ್ತಿಲ್ಲ. ಒಳ ಮೀಸಲಾತಿ ಜಾರಿಯಿಂದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮತ್ತಷ್ಟು ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಡಿಮೆ ಜನಸಂಖ್ಯೆಯ ಕೆಲವು ಸಮುದಾಯಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿದ್ದು, ಬಂಜಾರ ಸಮುದಾಯಕ್ಕೆ ಸೂಕ್ತ ಪ್ರಮಾಣದ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಅವಿನಾಶ್ ಜಾಧವ್ ಮಾತನಾಡಿ, ಬಂಜಾರ ಸೇರಿದಂತೆ ಸಂಬಂಧಿತ ಸಮುದಾಯಗಳ ಮೀಸಲಾತಿ ಸಮಸ್ಯೆಯ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಿ, ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಬಂಜಾರ ಸಮಾಜದ ಮುಖಂಡರಾದ, ಲತಾಮಾತಾ, ಮುರಹರಿ ಮಹರಾಜ, ಶಾಮರಾವ ಪವಾರ್, ವಿನೋದ ಚವ್ಹಾಣ, 

 ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.