ಗದಗದಲ್ಲಿ ಮಾದಿಗ ಮಹಾಸಭಾ ಉಗ್ರ ಪ್ರತಿಭಟನೆ: ಡಿಸಿ ಕಚೇರಿಗೆ ಮುತ್ತಿಗೆ.
ಗದಗದಲ್ಲಿ ಮಾದಿಗ ಮಹಾಸಭಾ ಉಗ್ರ ಪ್ರತಿಭಟನೆ: ಡಿಸಿ ಕಚೇರಿಗೆ ಮುತ್ತಿಗೆ.
ಗದಗ: ರಾಜ್ಯದಲ್ಲಿ ದಲಿತರ ಮೇಲಿನ ಸರಣಿ ದೌರ್ಜನ್ಯ, ಹತ್ಯೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಗದಗ ಜಿಲ್ಲಾ ಮಾದಿಗ ಮಹಾಸಭಾದ ವತಿಯಿಂದ ನಗರದಲ್ಲಿ ಬೃಹತ್ ರ‍್ಯಾಲಿ, ರಸ್ತೆ ತಡೆ ಹಾಗೂ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು.
ನಗರದ ಮುಳುಗುಂದ ನಾಕಾದಿಂದ ಹೊರಟ ಬೃಹತ್ ರ‍್ಯಾಲಿಯು ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆಯುವ ಮೂಲಕ ಸಾಗಿತು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನಾಯಕರು, ರಾಯಚೂರು ದೇವದುರ್ಗದ ಭೂಮಾನಂದ ಹತ್ಯೆ, ರೋಣದ ಅರಹುಣಸಿಯಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲಿನ ಅಮಾನವೀಯ ಅತ್ಯಾಚಾರ ಹಾಗೂ ದಾವಣಗೆರೆ ಬೆಳಗೆರೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಯುವಕರ ಮೇಲಿನ ಹಲ್ಲೆ ಪ್ರಕರಣಗಳನ್ನು ಖಂಡಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಗದಗ ಜಿಲ್ಲಾಧಿಕಾರಿಗಳಿಗೆ ಮಾನ್ಯ ರಾಜ್ಯಪಾಲರನ್ನು ಉದ್ದೇಶಿಸಿದ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು. ಈ ವೇಳೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಆಡಳಿತ ವ್ಯವಸ್ಥೆ ಮತ್ತು ತಹಶೀಲ್ದಾರ್ ಅಧಿಕಾರಿಗಳ ನಡೆಗೆ ಮುಖಂಡರು ಜಿಲ್ಲಾಧಿಕಾರಿಗಳನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ಕೊಲೆಗಾರರು ಹಾಗೂ ಅತ್ಯಾಚಾರಿಗಳನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು, ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, 10 ಎಕರೆ ಜಮೀನು ಮತ್ತು ಸರ್ಕಾರಿ ಉದ್ಯೋಗ ನೀಡಬೇಕು. ದೌರ್ಜನ್ಯ ತಡೆಯಲು ವಿಫಲವಾದರೆ ರಾಜ್ಯದ 31 ಜಿಲ್ಲೆಗಳಲ್ಲೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ವಿಜಯ ಕಲ್ಮನಿ, ಜಿಲ್ಲಾಧ್ಯಕ್ಷ ಉಡಚಪ್ಪ ಹಳ್ಳಿಕೇರಿ ಸೇರಿದಂತೆ ಅನೇಕ ದಲಿತ ಪರ ಹೋರಾಟಗಾರರು ಭಾಗವಹಿಸಿದ್ದರು.
ವರದಿ.ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

