ರಾಷ್ಟ್ರ ಧ್ವಜ ಸಂಹಿತೆ ಅರಿವು ಅತ್ಯವಶ್ಯಕ -ಉದಯಕುಮಾರ್ ಚಿಂಚೋಳಿ

ರಾಷ್ಟ್ರ ಧ್ವಜ ಸಂಹಿತೆ ಅರಿವು ಅತ್ಯವಶ್ಯಕ -ಉದಯಕುಮಾರ್ ಚಿಂಚೋಳಿ

ರಾಷ್ಟ್ರ ಧ್ವಜ ಸಂಹಿತೆ ಅರಿವು ಅತ್ಯವಶ್ಯಕ -ಉದಯಕುಮಾರ್ ಚಿಂಚೋಳಿ 

ಕಲಬುರ್ಗಿ: ಪ್ರತಿಯೊಬ್ಬರೂ ರಾಷ್ಟ್ರ ಗೀತೆ ಹಾಗೂ ರಾಷ್ಟ್ರ ಧ್ವಜ ಸೇರಿದಂತೆ ರಾಷ್ಟ್ರ ಲಾಂಛನಗಳಿಗೆ ಗೌರವ ನೀಡುವ ಜತೆಗೆ ಅವುಗಳ ಬಳಕೆಯ ಬಗ್ಗೆಯೂ ತಿಳಿದುಕೊಂಡಿರಬೇಕು, ದೇಶದ ಪ್ರಜೆಯು ರಾಷ್ಟ್ರಧ್ವಜ ಸಂಹಿತೆಯನ್ನು ಅರಿಯುವುದು ಅತ್ಯವಶ್ಯಕ’ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಹೇಳಿದರು

ಅವರು ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರೋ ಎಸ್ ವಿ ಮಲ್ಲಾಪೂರ ಯಾಂತ್ರಿಕ ತಂತ್ರಜ್ಞಾನ ವಿಭಾಗದಲ್ಲಿ ಜರುಗಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಕಲಬುರ್ಗಿ, ಭಾರತ ಸೇವಾದಳ ತಾಲೂಕು ಸಮಿತಿ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಮಾಹಿತಿ ತರಬೇತಿ ಶಿಬಿರದಲ್ಲಿ ಮಾತನಾಡುತ್ತಿದ್ದರು

ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನವಾದರೂ ಅದು ಅಪರಾಧವಾಗುತ್ತದೆ ಎಂದು ಅವರು ಎಚ್ಚರಿಸಿದರು.

ರಾಷ್ಟ್ರ ಧ್ವಜವನ್ನು ಖಾದಿ ಭಂಡಾರ ಗಳಲ್ಲಿ ಅದರಲ್ಲಿಯೂ ಐಎಸ್‌ಐ ಚಿಹ್ನೆ ಇರುವ ಧ್ವಜವನ್ನೇ ಖರೀದಿಸಬೇಕು. ನಿರ್ದಿಷ್ಟ ಅಳತೆ ಧ್ವಜವನ್ನೇ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಧ್ವಜಗಳನ್ನು ಎಂದೂ ಬಳಸಬಾರದು. ಅಲ್ಲದೆ ಮಕ್ಕಳಿಗೂ ಸಹಾ ರಾಷ್ಟ್ರ ಧ್ವಜದ ಮಹತ್ವ ಹಾಗೂ ಅದರ ಆರೋಹಣ ಮತ್ತು ಅವರೋಹಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ರಾಷ್ಟ್ರ ಗೀತೆಯನ್ನು ಹಾಡುವಾಗ ಅನೇಕ ನಿಯಮಗಳಿದ್ದು, ಸ್ಪಷ್ಟ ಮತ್ತು ತಪ್ಪಿಲ್ಲದಂತೆ ರಾಷ್ಟ್ರಗೀತೆಯನ್ನು ಹಾಡ ಬೇಕು. ಅಲ್ಲದೇ ರಾಷ್ಟ್ರಧ್ವಜವನ್ನು ಹಾರಿಸಿದ ಸಂದರ್ಭದಲ್ಲಿ ವಂದೇ ಮಾತರಂ, ರಾಷ್ಟ್ರಗೀತೆ, ಧ್ವಜಗೀತೆಗಳನ್ನು ಕಡ್ಡಾಯ ವಾಗಿ ಹಾಡಬೇಕು. ಧ್ವಜಸ್ತಂಭವು ನಿರ್ದಿಷ್ಟ ಅಳತೆಯಲ್ಲಿರಬೇಕೆಂದೇನು ಇಲ್ಲ . ಆದರೆ ಧ್ವಜಸ್ತಂಭ ಹಾಗೂ ಧ್ವಜದ ಕಂಬ ಬಿಳಿ ಬಣ್ಣದಿಂದ ಕೂಡಿರಬೇಕು. ಧ್ವಜಾರೋಹಣ ಹಾಗೂ ಧ್ವಜ ಅರೋಹಣದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಪ್ರತಿಯೊಂದು ಹಂತವನ್ನು, ಧ್ವಜಕ್ಕೆ ಕಟ್ಟುವ ನೂಲಿನ ದಾರ, ಧ್ವಜ ಕಂಬದ ಸುತ್ತಳತೆ, ಧ್ವಜ ರಕ್ಷಕರ ಪಾತ್ರ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಡಿಗೇರ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಲಕ್ಷ್ಮೀಕಾಂತ ರಾಕಾ, ಉಪ ಪ್ರಾಚಾರ್ಯರಾದ ಡಾ ಭಾರತಿ ಹರಸೂರ ವೇದಿಕೆ ಮೇಲೆ ಉಪಸ್ಥಿತರಿದ್ದರು 

ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ಸ್ವಾಗತಿಸಿದರು,ಬಾ ಸುಜಾತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು