ಹಿರಿಯ ವೈದ್ಯ ಡಾ. ಜಿ. ಕೆ. ಕಾಳೆಯವರ ಅಮೃತ ಮಹೋತ್ಸವ ಸಂಭ್ರಮ
ನರೇಗಲ್‌ನಲ್ಲಿ ‘ಸಮರ್ಪಿತ’ ಅಭಿನಂದನ ಗ್ರಂಥ ಲೋಕಾರ್ಪಣೆ ಫೆ. 22ರಂದು
ಹಿರಿಯ ವೈದ್ಯ ಡಾ. ಜಿ. ಕೆ. ಕಾಳೆಯವರ ಅಮೃತ ಮಹೋತ್ಸವ ಸಂಭ್ರಮ
ನರೇಗಲ್, ಫೆ.19: ಪಟ್ಟಣದ ಹಿರಿಯ ವೈದ್ಯರಾದ ಡಾ. ಜಿ. ಕೆ. ಕಾಳೆ ಹಾಗೂ ಭಾಗ್ಯವತಿ ಅನಿಲ ಕಾಳೆಯವರ 75ನೇ ವರ್ಷದ ಅಮೃತ ಮಹೋತ್ಸವದ ಸವಿನೆನಪಿಗಾಗಿ ‘ಸಮರ್ಪಿತ’ ಅಭಿನಂದನ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಫೆಬ್ರವರಿ 22ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಸಮೀಪದ ಕೋಡಿಕೊಪ್ಪ ಗ್ರಾಮದ ವೀರಪ್ಪಜ್ಜನ ಮಠದಲ್ಲಿ ಆಯೋಜಿಸಲಾಗಿದೆ.
ಡಾ. ಕಾಳೆಯವರ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ-ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಹಿತೈಶಿಗಳು ಬರೆದ ಲೇಖನಗಳ ಸಂಕಲನವೇ ‘ಸಮರ್ಪಿತ’ ಅಭಿನಂದನ ಗ್ರಂಥವಾಗಿದೆ. ಈ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಸಿದ್ದನಕೊಳ್ಳದ ನಿರಂತರ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ.
ರೋಣ ಶಾಸಕ ಜಿ. ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ. ಆರ್. ಪಾಟೀಲ ‘ಸಮರ್ಪಿತ’ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಳಕಪ್ಪ ಜಿ. ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಸಿದ್ದಪ್ಪ ಜಿ. ಬಂಡಿ ಹಾಗೂ ರವೀಂದ್ರನಾಥ ದೊಡ್ಡಮೇಟಿ ಪಾಲ್ಗೊಳ್ಳಲಿದ್ದಾರೆ. ಬಾಗಲಕೋಟೆಯ ಅನಂತ ಕುಲಕರ್ಣಿ ಮತ್ತು ಸಂಗಡಿಗರಿಂದ ಸಂಗೀತ ಸೇವೆ ನಡೆಯಲಿದೆ.
ಕಾರ್ಯಕ್ರಮದ ಬಳಿಕ ಡಾ. ಜಿ. ಕೆ. ಕಾಳೆಯವರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿಗಳಿಂದ ಗೌರವ ಸನ್ಮಾನಗಳು ನಡೆಯಲಿವೆ ಎಂದು ಕಾಳೆ ಪರಿವಾರ ಮತ್ತು ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ
