ನಾಗ ಪಂಚಮಿಯ ಪಾವಿತ್ರ್ಯ ಅರಿತು ಸಂಪ್ರದಾಯ ಪಾಲಿಸಿ : ಬಸವಾಮೃತ ಗೋರಕ್ಷ ಶರಣ

ನಾಗ ಪಂಚಮಿಯ ಪಾವಿತ್ರ್ಯ ಅರಿತು ಸಂಪ್ರದಾಯ ಪಾಲಿಸಿ : ಬಸವಾಮೃತ ಗೋರಕ್ಷ ಶರಣ

ನಾಗ ಪಂಚಮಿಯ ಪಾವಿತ್ರ್ಯ ಅರಿತು ಸಂಪ್ರದಾಯ ಪಾಲಿಸಿ : ಬಸವಾಮೃತ ಗೋರಕ್ಷ ಶರಣ

ಕಲಬುರಗಿ, ಆ.14: ನಾಗರ ಪಂಚಮಿಯಂದು ಹುತ್ತಿಗೆ ಹಾಲು ಎರೆಯುವುದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಕಾರ್ಯವಾಗಿದೆ ಎಂದು ಬಸವಾಮೃತ ಗೋರಕ್ಷ ಶರಣರು ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಪರಂಪರೆಯಲ್ಲಿ ಹಬ್ಬಗಳ ಆರಂಭ ನಾಗ ಪಂಚಮಿಯಿಂದ ಆಗುತ್ತದೆ. ನಾಗ ಪಂಚಮಿಯಂದು ಗ್ರಾಮೀಣ ಕ್ರೀಡೆಗಳಿಗೆ ವಿಶೇಷ ಉತ್ತೇಜನ ದೊರೆಯುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಟೆಂಗಿನ ಆಟ, ನಿಂಬೆಯ ಆಟ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕ್ರೀಡೆಗಳು ನಡೆಯುತ್ತವೆ. ಇವುಗಳು ಗ್ರಾಮೀಣ ಸಂಸ್ಕೃತಿ ಮತ್ತು ಜನಪದ ಪರಂಪರೆಯ ಪ್ರತೀಕಗಳಾಗಿವೆ ಎಂದರು.

ನಾಗ ಪಂಚಮಿ ಮಹಿಳೆಯರ ಪಾಲಿಗೂ ಅತ್ಯಂತ ಸಂತಸದ ಹಬ್ಬವಾಗಿದೆ. ಹೊಸದಾಗಿ ಮದುವೆಯಾಗಿ ಗಂಡನ ಮನೆಯಲ್ಲಿ ಇರುವ ಮಹಿಳೆಯರು ತವರು ಮನೆಗೆ ತೆರಳಿ, ಬಂಧು-ಬಳಗ ಹಾಗೂ ಗೆಳತಿಯರೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೊಸ ಸೀರೆ ಧರಿಸಿ, ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು, ಹುತ್ತಿಗೆ ಹಾಲು ಎರೆಯುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ ಎಂದು ತಿಳಿಸಿದರು.

ನಮ್ಮ ಹಿರಿಯರು ಯಾವುದೇ ಕಾರಣವಿಲ್ಲದೆ ಅಥವಾ ಮೂಢನಂಬಿಕೆಯ ಆಧಾರದ ಮೇಲೆ ಇಂತಹ ಆಚರಣೆಗಳನ್ನು ರೂಪಿಸಿಲ್ಲ. ನಾಗ ಪಂಚಮಿ ಆಷಾಢ ಮಾಸದ ಮುಕ್ತಾಯ ಹಾಗೂ ಶ್ರಾವಣ ಮಾಸದ ಆರಂಭದ ಸಂದರ್ಭದಲ್ಲಿ ಬರುತ್ತದೆ. ಹುತ್ತಿಗೆ ಹಾಲು ಎರೆಯುವ ಸಂಪ್ರದಾಯದ ಹಿಂದೆ ಪರಿಸರ ಮತ್ತು ಕೃಷಿಗೆ ಸಂಬಂಧಿಸಿದ ಅಂಶಗಳೂ ಇವೆ ಎಂದು ಅವರು ವಿವರಿಸಿದರು.

ಶ್ರಾವಣ ಮಾಸದಲ್ಲಿ ಶಿವನಿಗೆ ಕ್ಷೀರಾಭಿಷೇಕ ಮಾಡುವ ಪರಂಪರೆಯೂ ಇದೆ. ಪ್ರಾಚೀನ ಗ್ರಂಥಗಳಲ್ಲಿ ಶ್ರಾವಣ ಮಾಸದಲ್ಲಿ ಹಾಲಿನ ಸೇವನೆಗೆ ಸಂಬಂಧಿಸಿದ ನಿಯಮಗಳ ಉಲ್ಲೇಖವಿದ್ದು, ಮಳೆಗಾಲದಲ್ಲಿ ಜಾನುವಾರುಗಳ ಆಹಾರದಲ್ಲಿ ಬದಲಾವಣೆ ಉಂಟಾಗುವುದರಿಂದ ಹಾಲಿನ ಗುಣಮಟ್ಟದಲ್ಲಿಯೂ ಬದಲಾವಣೆ ಸಂಭವಿಸಬಹುದು ಎಂಬುದನ್ನು ಹಿರಿಯರು ತಮ್ಮ ಅನುಭವದ ಮೂಲಕ ಅರಿತಿದ್ದರು. ಹೀಗಾಗಿ ಧಾರ್ಮಿಕ ಆಚರಣೆಗಳ ಮೂಲಕ ಪ್ರಕೃತಿ, ಕೃಷಿ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿತ್ತು ಎಂದು ಹೇಳಿದರು.

ಇಂದಿನ ವೈಜ್ಞಾನಿಕ ಯುಗದಲ್ಲಿ ನಮ್ಮ ಹಿರಿಯರ ಆಚರಣೆಗಳ ಹಿಂದಿರುವ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ಅಂಶಗಳನ್ನು ಅರ್ಥಮಾಡಿಕೊಂಡು, ಸಂಪ್ರದಾಯಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಬಸವಾಮೃತ ಗೋರಕ್ಷ ಶರಣರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದೀಪಕ್ ಪವಾರ, ಮಹಾದೇವಿ ಪಾಟೀಲ್, ಶಶಿಕಾಂತ ಆರ್. ದೀಕ್ಷಿತ್, ವಿಜಯಲಕ್ಷ್ಮೀ ಸಿಂಗೋಡಿ, ರೇಣುಕಾ ಹಿರೇಮಠ, ಶಿವಲೀಲಾ ಹಿರೇಮಠ, ಸಂತೋಷ ಛತ್ರಬಂದ್, ಪ್ರಭಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.