ಪರಿಶಿಷ್ಟ ಜಾತಿ ಯುವತಿಯ ಮೇಲೆ ದಾಳಿ: ಆರೋಪಿಗಳ ಬಂಧನಕ್ಕೆ ಡಾ.ಅಷ್ಠಗಿ - ಮ್ಯಾಕೇರಿ ಆಗ್ರಹ

ಪರಿಶಿಷ್ಟ ಜಾತಿ ಯುವತಿಯ ಮೇಲೆ ದಾಳಿ: ಆರೋಪಿಗಳ ಬಂಧನಕ್ಕೆ ಡಾ.ಅಷ್ಠಗಿ - ಮ್ಯಾಕೇರಿ ಆಗ್ರಹ

ಪರಿಶಿಷ್ಟ ಜಾತಿ ಯುವತಿಯ ಮೇಲೆ ದಾಳಿ: ಆರೋಪಿಗಳ ಬಂಧನಕ್ಕೆ ಡಾ.ಅಷ್ಠಗಿ - ಮ್ಯಾಕೇರಿ ಆಗ್ರಹ

ಕಲಬುರಗಿ: ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 27/2026 ರಂತೆ ದಾಖಲಾಗಿರುವ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವ ಪೊಲೀಸರ ಕ್ರಮವನ್ನು ಜಿಲ್ಲಾ ನಾಗರಿಕ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸಮಿತಿಯ ಅಧ್ಯಕ್ಷ ಡಾ. ಅಂಬಾರಾಯ ಅಷ್ಠಗಿ ಹಾಗೂ ಸಂಚಾಲಕ ಅವ್ವಣ್ಣ ಮ್ಯಾಕೇರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, 

07-02-2026 ರಂದು, ಬೆಳಿಗ್ಗೆ 5:30 ಗಂಟೆಯ ಸುಮಾರಿಗೆ ನಗರದ ಮಾಂಗರವಾಡಿ (ಬಾಪುನಗರ) ಬಡಾವಣೆಯ ಪರಿಶಿಷ್ಟ ಜಾತಿಯ ವಿಧವಾ ಯುವತಿ ತನ್ನ ಜೀವನೋಪಾಯಕ್ಕಾಗಿ ಚಿಂದಿ/ಪ್ಲಾಸ್ಟಿಕ್ ಆಯ್ದುಕೊಳ್ಳಲು ಹಾಗರಗಾ ಕ್ರಾಸ್ ಹತ್ತಿರದ ಸೋನಿಯಾಗಾಂಧಿ ಲೇಔಟ್‌ಗೆ ತೆರಳಿದ್ದ ವೇಳೆ ಕೆಲವು ಯುವಕರು ಆಕೆಯನ್ನು ಬೆನ್ನಟ್ಟಿ ಹಲ್ಲೆ ನಡೆಸಿ, ಎಳೆದಾಡಿ ಕಾರಿನಲ್ಲಿ ಕೊಂಡೊಯ್ಯಲು ಪ್ರಯತ್ನಿಸಿರುವ ಘಟನೆ ಕಿಡಿಗೇಡಿಗಳ ಹೇಯ ಕೃತ್ಯವಾಗಿದೆ ಎಂದು ತಿಳಿಸಿದ್ದಾರೆ. ಓಂ ಸಮಯದಲ್ಲಿ ಯುವತಿ ಕಿರುಚಾಡಿದಾಗ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡುತ್ತ, ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಕೆಯ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ,ನಗರ ಪೊಲೀಸ ಆಯುಕ್ತರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಮಾಡಲಾಗಿತ್ತು. ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಎಂದು ಅವರು ಹೇಳಿದರು.

ಆದರೆ, ಕೆಳಹಂತದ ಕೆಲ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪ್ರಭಾವಕ್ಕೆ ಒಳಗಾಗಿ ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳುತ್ತಿರುವುದು ದುಃಖಕರ ಸಂಗತಿ ಎಂದು ಡಾ. ಅಂಬಾರಾಯ ಅಷ್ಠಗಿ ಹಾಗೂ ಅವ್ವಣ್ಣ ಮ್ಯಾಕೇರಿ ಆರೋಪಿಸಿದ್ದಾರೆ.

 07-02-2026 ರಂದು ಸಂಜೆ 5 ಗಂಟೆಗೆ ಲಿಖಿತ ದೂರು ನೀಡಿದರೂ, “ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಪೋಲಿಸರು ಸಂತ್ರಸ್ತೆಗೆ ನೀವು ಏಕೆ ಅಟ್ರಾಸಿಟಿ, ಮಾರಣಾಂತಿಕ ಹಲ್ಲೆ ಮತ್ತು ಬಲಾತ್ಕಾರ ಪ್ರಯತ್ನದ ಪ್ರಕರಣಗಳನ್ನು ದಾಖಲಿಸುತ್ತೀರಿ?” ಎಂದು ಪ್ರಶ್ನಿಸಿ ದೂರು ಹಿಂಪಡೆಯುವಂತೆ ಒತ್ತಡ ಹೇರಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯ ಕೆಲ ಮುಖಂಡರು ಹಾಗೂ ಪೊಲೀಸರು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದರೂ, ಸಂತ್ರಸ್ತೆ ತನ್ನ ಮೇಲಾದ ಅನ್ಯಾಯದ ಕುರಿತು ದಿಟ್ಟವಾಗಿ ಪ್ರತಿಭಟಿಸಿದ ಬಳಿಕವೇ ಎಫ್‌ಐಆರ್ ದಾಖಲಿಸಲಾಗಿದೆ ಆದರೆ ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸಿಲ್ಲವೆಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿಯ ವಿಧವಾ ಯುವತಿಯ ಮೇಲಿನ ಗಂಭೀರ ದಾಳಿ ಪ್ರಕರಣದಲ್ಲಿ ಸಂತ್ರಸ್ತೆಯ ಪರ ನಿಲ್ಲಬೇಕಾದ ಪೊಲೀಸರು ಆರೋಪಿಗಳ ಪರ ವಾದಿಸುವುದು ನಾಚಿಕೆಗೇಡಿನ ಸಂಗತಿ ಎಂದು ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಆದ್ದರಿಂದ ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತನಿಖೆಯ ಪ್ರಗತಿಯನ್ನು ಗಮನಿಸಿ, ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪೊಲೀಸ ಆಯುಕ್ತರ ಕಚೇರಿ ಎದುರು ಸಾವಿರಾರು ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಡಾ ಅಂಬಾರಾಯ ಅಷ್ಠಗಿ, ಸಂಚಾಲಕ ಅವ್ವಣ್ಣ ಮ್ಯಾಕೇರಿ, ಪ್ರಮುಖರಾದ ಗಣೇಶ ವಳಕೇರಿ, ರಾಜು ವಾಡೆಕರ್, ಗಿರೀಶ್ ಭಜಂತ್ರಿ, ಶ್ರೀಧರ್ ಉಪಾಧ್ಯಾಯ, ಮಾಳಪ್ಪ ಪೂಜಾರಿ ಹಾಗೂ ಫತ್ರು ರಾಥೋಡ್ ಉಪಸ್ಥಿತರಿದ್ದರು.