ಬೆಳಕೋಣಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಛಲವಾದಿ ನಾರಾಯಣಸ್ವಾಮಿ

ಬೆಳಕೋಣಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಛಲವಾದಿ ನಾರಾಯಣಸ್ವಾಮಿ

ಬೆಳಕೋಣಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಛಲವಾದಿ ನಾರಾಯಣಸ್ವಾಮಿ

ಕಮಲನಗರ : ಇತ್ತೀಚೆಗೆ ತಾಲ್ಲೂಕಿನ ಬೆಳಕೋಣಿ (ಭೋ) ಗ್ರಾಮದ ಬಾಲಕಿಯ ಮೇಲಿನ ದಾರುಣ ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮೇ 28ರಂದು ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಾಲಕಿಯ ಕುಟುಂಬದ ಸಮಸ್ಯೆಗಳನ್ನು ಆಲಿಸಿದ ಅವರು, ತಹಸೀಲ್ದಾರರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಪ್ರಕರಣದ ಕುರಿತು ಮಾಹಿತಿ ಪಡೆದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮೃತ ಬಾಲಕಿಯ ಕುಟುಂಬವು ಅತ್ಯಂತ ಬಡತನದಲ್ಲಿದ್ದು, ಘಟನೆ ನಡೆದ ತಕ್ಷಣವೇ ಪರಿಹಾರ ನೀಡಬೇಕಾಗಿತ್ತು. ಸುಮಾರು 20 ದಿನಗಳು ಕಳೆದರೂ ಅಗತ್ಯ ನೆರವು ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.

ಬಳಿಕ ಮಾತನಾಡಿದ ಅವರು, ಪ್ರಕರಣದ ಸಂಪೂರ್ಣ ಮಾಹಿತಿ ಪಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕೂಡ ಮಾತನಾಡುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕರಾದ ಪ್ರಭು ಬಿ. ಚವ್ಹಾಣ, ಮೃತ ವಿದ್ಯಾರ್ಥಿನಿ ಅತ್ಯಂತ ಪ್ರತಿಭಾವಂತೆಯಾಗಿದ್ದು, ಕುಸ್ತಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿ ಸಾಧನೆ ಮಾಡಿದ್ದಳು ಎಂದು ಸ್ಮರಿಸಿದರು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ಪರಿಹಾರ ಹಾಗೂ ನ್ಯಾಯ ದೊರಕಿಸಲು ಸೂಚನೆ ನೀಡಿದ್ದೇನೆ. ದುಃಖದ ಈ ಸಂದರ್ಭದಲ್ಲಿ ನಾನು ಸದಾ ಕುಟುಂಬದೊಂದಿಗೆ ಇದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ತಹಸೀಲ್ದಾರ ಅಮಿತ್ ಕುಲಕರ್ಣಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.