ಶಿಸ್ತು, ಸಂಘಟನೆ, ಸೇವಾ ಮನೋಭಾವನೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಚಂದ್ರಕಾಂತ ತಳವಾರ
ಶಿಸ್ತು, ಸಂಘಟನೆ, ಸೇವಾ ಮನೋಭಾವನೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಚಂದ್ರಕಾಂತ ತಳವಾರ
ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅದರ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಕವಲಗಾ (ಬಿ) ಅಧ್ಯಕ್ಷ ಚಂದ್ರಕಾಂತ ದಶರಥ ತಳವಾರ ಹೇಳಿದರು.
ಕವಲಗಾ (ಬಿ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜೀವನದ ಪ್ರತಿಯೊಂದು ಹಂತದಲ್ಲಿಯೂ ಶಿಸ್ತು, ಸಂಘಟನೆ ಹಾಗೂ ಸೇವಾ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ರೈತರು ಮತ್ತು ರೈತರ ಮಕ್ಕಳು ಆರ್ಥಿಕವಾಗಿ ಸಬಲರಾಗಬೇಕು. ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಜನರು ಅಭಿವೃದ್ಧಿ ಹೊಂದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವ್ಯ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರಿಗೆ ಅಗತ್ಯ ಸಹಾಯ, ಸಹಕಾರ ನೀಡುವುದರ ಜೊತೆಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಘದ ನಿರ್ದೇಶಕರು, ರೈತರು ಹಾಗೂ ಗ್ರಾಮಸ್ಥರು ತಮ್ಮ ಮೇಲೆ ವಿಶ್ವಾಸವಿಟ್ಟು ಸತತ ಮೂರನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉತ್ಸಾಹವಿದೆ ಎಂದರು.
ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶಗಳ ಪ್ರಗತಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಅವ್ವಣ್ಣ ನಡುವಿನಮನಿ, ನಿರ್ದೇಶಕರಾದ ಬುಕಾಂತ ಪಾಟೀಲ, ಮಹಾಂತಯ್ಯ ಸ್ವಾಮಿ, ಗುಂಡು ಮೈನಾಳ, ಬೈಲಪ್ಪ ಪೂಜಾರಿ, ಭಾರತ ಕವಲಗಾ, ಭೀಮಾಶಂಕರ, ಕವಲಗಾ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು, ಮಾಜಿ ಸದಸ್ಯರಾದ ವೈಯಿದ್ ಪಟೇಲ್, ಬಸಪ್ಪ ಪೂಜಾರಿ, ಕರಬಸಪ್ಪ ಮ್ಯಾಕೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

