ಶ್ರಾವಣ ಮಾಸದಲ್ಲಿ ‘ಶರಣ ದರ್ಶನ’ ಉಪನ್ಯಾಸ ಮಾಲೆ
ಶ್ರಾವಣ ಮಾಸದಲ್ಲಿ ‘ಶರಣ ದರ್ಶನ’ ಉಪನ್ಯಾಸ ಮಾಲೆ
ಕಲಬುರಗಿ: ವಚನೋತ್ಸವ ಪ್ರತಿಷ್ಠಾನ ವತಿಯಿಂದ 2026ರ ಶ್ರಾವಣ ಮಾಸದ ಅಂಗವಾಗಿ ನಗರದ ವಿವಿಧ ಬಡಾವಣೆಗಳ ಶರಣ ತತ್ವಾಭಿಮಾನಿಗಳ ಮನೆಯಂಗಳದಲ್ಲಿ ‘ಶರಣ ದರ್ಶನ’ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಆಗಸ್ಟ್ 12ರಿಂದ ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ತಿಳಿಸಿದ್ದಾರೆ.
ಶ್ರಾವಣ ಮಾಸದ ಪುಣ್ಯ ಶ್ರವಣದ ಕಾರ್ಯಕ್ರಮಗಳು ಸರ್ವರಿಗೂ ಹಿತವನ್ನುಂಟು ಮಾಡುವಂತಹ ಕಾರ್ಯಗಳಾಗಿವೆ. ಕಳೆದ ಹಲವು ವರ್ಷಗಳಿಂದ ಶರಣ ತತ್ವಾಭಿಮಾನಿಗಳ ಮನೆಯಂಗಳದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ನುರಿತ ಉಪನ್ಯಾಸಕರಿಂದ ಶರಣರ ತತ್ವ, ವಚನ ಸಾಹಿತ್ಯ ಹಾಗೂ ಶರಣ ಸಂಸ್ಕೃತಿಯ ಕುರಿತು ಉಪನ್ಯಾಸ ಮಾಲೆ ಆಯೋಜಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಕೆ.ಸಿ.ಇ.ಡಿ.ಟಿ. ಬಾಲಕಿಯರ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಕುಪೇಂದ್ರ ಪಾಟೀಲ, ಪದಾಧಿಕಾರಿಗಳಾದ ಬಸವರಾಜ ಧೂಳಾಗುಂಡಿ, ಬಿ.ಕೆ. ಹಳ್ಳಿ, ಶಿವರಾಜ ಅಂಡಗಿ, ಕಲ್ಯಾಣಪ್ಪ ಬಿರಾದಾರ, ಸಿದ್ರಾಮ ಹಂಚನಾಳ, ವಿನೋದಕುಮಾರ ಜನೇವರಿ, ವಿಶ್ವನಾಥ ಮಂಗಲಗಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ವೀರಣ್ಣ ತೊರವಿ, ಬಸಯ್ಯ ಸ್ವಾಮಿ, ರುದ್ರಪ್ಪ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಗಸ್ಟ್ 12ರಿಂದ ಪ್ರತಿದಿನ ಸಂಜೆ 6.30ಕ್ಕೆ ನಗರದ ವಿವಿಧ ಬಡಾವಣೆಗಳ ಶರಣರ ಮನೆಯಂಗಳದಲ್ಲಿ ‘ಶರಣ ದರ್ಶನ’ ಉಪನ್ಯಾಸ ಮಾಲೆ ನಡೆಯಲಿದೆ. ಕಾರ್ಯಕ್ರಮದ ಸಂಚಾಲಕರಾಗಿ ಶಿವರಾಜ ಅಂಡಗಿ ಹಾಗೂ ಬಸವರಾಜ ಧೂಳಾಗುಂಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಆಗಸ್ಟ್ 12ರಂದು ಉದ್ಘಾಟನೆ:
ಉಪನ್ಯಾಸ ಮಾಲೆಯ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 12ರಂದು ಸಂಜೆ 6 ಗಂಟೆಗೆ ಎಂ.ಜಿ. ರಸ್ತೆಯ ಜೆಸ್ಕಾಂ ಕಚೇರಿ ಪಕ್ಕದಲ್ಲಿರುವ ಜಗನ್ನಾಥ ರಾಚೋಟಿ ಬೈಯೋಪ್ಲಾಸ್ಮಿಡ್ ಹೆಲ್ತ್‌ಕೇರ್‌ನಲ್ಲಿ ನಡೆಯಲಿದೆ. ಕೆ.ಕೆ.ಸಿ.ಸಿ.ಐ. ಅಧ್ಯಕ್ಷ ಶರಣು ಪಪ್ಪಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ. ವೀರಣ್ಣ ದಂಡೆ ಉಪನ್ಯಾಸ ನೀಡಲಿದ್ದಾರೆ. ತೆಗನೂರು ಕಾಲೇಜಿನ ಅಧ್ಯಕ್ಷ ರವೀಂದ್ರ ತೆಗನೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬಿ.ಕೆ. ಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಲಿರುವ ‘ಶರಣ ದರ್ಶನ’ ಕಾರ್ಯಕ್ರಮಗಳಿಗೆ ಶರಣ ತತ್ವಾಭಿಮಾನಿಗಳು ಹಾಗೂ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಚಾಲಕರಾದ ಬಸವರಾಜ ಧೂಳಾಗುಂಡಿ ಹಾಗೂ ಶಿವರಾಜ ಅಂಡಗಿ ಮನವಿ ಮಾಡಿದ್ದಾರೆ.

