ಶ್ರೀ ಶರಣಗೌಡ ಪಾಟೀಲ ಜೈನಾಪುರಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ
ಶ್ರೀ ಶರಣಗೌಡ ಪಾಟೀಲ ಜೈನಾಪುರಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ
ಜೇವರ್ಗಿ: ದಿನಾಂಕ 05-02-2026 ರಂದು ಜೇವರ್ಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ತತ್ವಪದಕಾರರ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ರಂಗಂಪೇಟೆಯ ಡಾ. ಅಂಬೇಡ್ಕರ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕರಾದ ಶ್ರೀ ಶರಣಗೌಡ ಪಾಟೀಲ ಜೈನಾಪುರ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಡು–ನುಡಿ, ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸುಮಾರು ಮೂರೂವರೆ ದಶಕಗಳಿಂದ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪನ್ಯಾಸಕರಾಗಿ, ಸಾಹಿತಿಯಾಗಿ ಹಾಗೂ ಸಂಘಟಕರಾಗಿ ಗುರುತಿಸಿಕೊಂಡಿರುವ ಶ್ರೀ ಶರಣಗೌಡ ಪಾಟೀಲ ಜೈನಾಪುರ ಅವರು ಹತ್ತು ಹಲವಾರು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಇದುವರೆಗೆ 12 ಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಸಗರನಾಡಿನ ಸಾಹಿತ್ಯಾಸಕ್ತರಿಗೆ ಚಿರಪರಿಚಿತರಾಗಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಸುಗುರೇಶ್ ವಾರದ, ಪ್ರಕಾಶ್ ಅಂಗಡಿ, ಎಸ್.ಕೆ. ಬಿರಾದಾರ, ಶಾಂತಪ್ಪ ಬೂದಿಹಾಳ, ಡಾ. ಗೋವಿಂದರಾಜ ಆಲದಾಳ, ಸುರೇಶ್ ಹಿರೇಮಠ, ಡಾ. ಧರ್ಮಣ್ಣ ಬಡಿಗೇರ, ಶರಣು ಗದ್ದುಗೆ, ಎ. ಕಮಲಾಕರ, ಡಾ. ಮಲ್ಲಿನಾಥ ತಳವಾರ, ವಿಶ್ವನಾಥ ಜಿ. ಪಾಟೀಲ, ಅಶೋಕ್ ಸಾಹು ಗೋಗಿ, ಜಾವೇದ್ ಹವಾಲ್ದಾರ್, ಪ್ರೊಫೆಸರ್ ಲಕ್ಷ್ಮಣ ಕೌಂಟೆ ಸೇರಿದಂತೆ ಅನೇಕ ಉಪನ್ಯಾಸಕರು, ಶಿಕ್ಷಣಪ್ರೇಮಿಗಳು ಹಾಗೂ ಸಾಹಿತಿಗಳು ಅಭಿನಂದನೆ ಹಾಗೂ ಹರ್ಷ ವ್ಯಕ್ತಪಡಿಸಿದ್ದಾರೆ.
