ಪ್ರತ್ಯೇಕ ರಾಜ್ಯದ ಕೂಗು: ಕಲಬುರಗಿಯಲ್ಲಿ ಪ್ರತಿಭಟನೆ, ಹೋರಾಟಗಾರರ ಬಂಧನ ಹಾಗೂ ಬಿಡುಗಡೆ

ಪ್ರತ್ಯೇಕ ರಾಜ್ಯದ ಕೂಗು: ಕಲಬುರಗಿಯಲ್ಲಿ ಪ್ರತಿಭಟನೆ, ಹೋರಾಟಗಾರರ ಬಂಧನ ಹಾಗೂ ಬಿಡುಗಡೆ

ಪ್ರತ್ಯೇಕ ರಾಜ್ಯದ ಕೂಗು: ಕಲಬುರಗಿಯಲ್ಲಿ ಪ್ರತಿಭಟನೆ, ಹೋರಾಟಗಾರರ ಬಂಧನ ಹಾಗೂ ಬಿಡುಗಡೆ 

ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಇಂದು, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕೋರ್ಟ್ ಮುಂದೆ ಇರುವ ವಿಜ್ಞಾನೇಶ್ವರ ವೃತ್ತ ದಲ್ಲಿ ಕಾರ್ಯಕರ್ತರು ಜಮಾವಣೆ ಗೊಂಡು ಮುಖ್ಯ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಪ್ರತ್ಯೇಕ ರಾಜ್ಯದ ಪರ ಘೋಷಣೆಗಳನ್ನು ಕೂಗುತ್ತಾ, ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹೋರಾಟಗಾರ, ಎಮ್. ಎಸ್. ಪಾಟೀಲ ನರಿಬೋಳ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಅನೇಕರು ಭಾಗವಹಿಸಿದ್ದರು.

 ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಮುಖ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ವಶಕ್ಕೆ ಪಡೆದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಗೆ ಕರೆದುಕೊಂಡು ಹೋಗಿ, ಮಾಹಿತಿ ಪಡೆದು ಕೆಲ ಸಮಯದ ನಂತರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನಾಕಾರರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಜನರ ಆಶೋತ್ತರಗಳ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತ್ಯೇಕ ರಾಜ್ಯದ ರಚನೆಯಿಂದ ಈ ಭಾಗದ ಅಭಿವೃದ್ಧಿಗೆ ಹೊಸ ಅವಕಾಶಗಳು ದೊರೆಯಲಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿನೋದ ಕುಮಾರ್ ಜೆನವೇರಿ ಅವರು ಕಲ್ಯಾಣ ಕರ್ನಾಟಕದ ಧ್ವಜವನ್ನು ಹಿಡಿದು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಪ್ರತಿಪಾದಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಲಕ್ಶ್ಮೀಕಾಂತ ಸ್ವಾದಿ, ಸಂಜೀವ ಕುಮಾರ ಗುತ್ತೇದಾರ, ಸಂಗಪ್ಪ ಚೋರ್ಗಸ್ತಿ, ಮಹೇಶ್ ಕೆಂಭಾವಿ, ಮುತ್ತಣ್ಣ ಪಾಟೀಲ, ಶರಣು ಶಿರೂರ್ ಮತ್ತು ಮಹಿಳಾ ಹೋರಾಟ ಗಾರ್ತಿ ಗಳಾದ ಸುಮಾ ಕವಾಲ್ದಾರ, ಶಮಿನಾ ಅಲಿ, ಇಂದ್ರಬಾಯಿ ರೆಡ್ಡಿ ಹಾಗೂ ಯುವ ಕಾರ್ಯಕರ್ತರು ಮತ್ತು kyf ನ ಸಂಘಟನಾ ಕಾರ್ಯದರ್ಶಿ ಉದಯ ಕುಮಾರ ಜೇವರ್ಗಿ, ಅಧ್ಯಕ್ಷ ಅನಂತ ಗುಡಿ ಹಾಗೂ ಪ್ರತ್ಯೇಕ ರಾಜ್ಯದ ಪರ ಹೋರಾಟಗಾರರು ಪಾಲ್ಗೊಂಡಿದ್ದರು.