ಗೊಬ್ಬರವಾಡಗಿ–ಆಲೂರು ರಸ್ತೆ ಕಳಪೆ ಕಾಮಗಾರಿ: ಕ್ರಮಕ್ಕೆ ರೈತ ಸಂಘ ಆಗ್ರಹ
ಗೊಬ್ಬರವಾಡಗಿ–ಆಲೂರು ರಸ್ತೆ ಕಳಪೆ ಕಾಮಗಾರಿ: ಕ್ರಮಕ್ಕೆ ರೈತ ಸಂಘ ಆಗ್ರಹ
ಕಾಮಗಾರಿ ಪರಿಶೀಲಿಸಿ, ಗುತ್ತಿಗೆದಾರರ ಬಿಲ್ ತಡೆಹಿಡಿಯಲು ಲಾಳೇಸಾಬ ಮನಿಯಾರ ಒತ್ತಾಯ
ಕಲಬುರಗಿ ; ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಕಲ್ಯಾಣ ಪಥ ಯೋಜನೆಯಡಿ ಕೆಕೆಆರ್ಡಿಬಿ ಅನುದಾನದಲ್ಲಿ ನಿರ್ಮಿಸಿರುವ ಗೊಬ್ಬರವಾಡಗಿ–ಜವಳಗಾ ರಸ್ತೆಯಿಂದ ಆಲೂರು ಗ್ರಾಮದವರೆಗಿನ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯಡ್ರಾಮಿ ತಾಲೂಕು ಅಧ್ಯಕ್ಷ ಲಾಳೇಸಾಬ ಎಸ್. ಮನಿಯಾರ ಆಗ್ರಹಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 19ರಂದು ಕಲಬುರಗಿ ಯೋಜನಾ ವಿಭಾಗದ ಗ್ರಾಮೀಣ ರಸ್ತೆ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿರುವ ಅವರು, 2024–25ನೇ ಸಾಲಿನ ಕೆಕೆಆರ್ಡಿಬಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಅಂದಾಜು ಪಟ್ಟಿಯಂತೆ ನಿರ್ವಹಿಸಿಲ್ಲ ಎಂದು ಆರೋಪಿಸಿದ್ದಾರೆ.
ರಸ್ತೆ ನಿರ್ಮಾಣದಲ್ಲಿ ಮುರುಮ್, ಜಲ್ಲಿ, ಜಿಎಸ್ಬಿ ಹಾಗೂ ಮಿಕ್ಸ್ ಕಾರ್ಪೆಟ್ನಂತಹ ಸಾಮಗ್ರಿಗಳನ್ನು ಸಮರ್ಪಕ ಗುಣಮಟ್ಟದಲ್ಲಿ ಬಳಸಿಲ್ಲ. ಇದರಿಂದ ರಸ್ತೆ ಡಾಂಬರೀಕರಣ ಕಿತ್ತುಹೋಗಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಕಳಪೆ ಕಾಮಗಾರಿಯಿಂದ ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಸೆಪ್ಟೆಂಬರ್ 19ರಂದು ಸಂಬಂಧಿಸಿದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು. ಕಳಪೆ ಕಾಮಗಾರಿ ನಡೆಸಿರುವುದು ದೃಢಪಟ್ಟಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಿ, ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು. ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ಮರುನಿರ್ಮಿಸಲು ಕ್ರಮ ಕೈಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಯ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

