ನ.1ರಿಂದ ನಂದಿನಿ ಹಾಲು, ಮೊಸರು ದರ ಏರಿಕೆ
ನ.1ರಿಂದ ನಂದಿನಿ ಹಾಲು, ಮೊಸರು ದರ ಏರಿಕೆ
ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ದರ ಪರಿಷ್ಕರಣೆ: ಕೆಎಂಎಫ್
ಬೆಂಗಳೂರು: ಹಾಲು ಉತ್ಪಾದಕ ರೈತರ ಹಿತಾಸಕ್ತಿ ಹಾಗೂ ಹೈನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿದೆ. ಪರಿಷ್ಕೃತ ದರಗಳು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿವೆ.
ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಪ್ರತಿದಿನ ಸುಮಾರು 89 ಲಕ್ಷ ಲೀಟರ್ ಹಾಲು ಸಹಕಾರ ಸಂಘಗಳಿಗೆ ಪೂರೈಕೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ನೀರು ಮತ್ತು ಮೇವಿನ ಅಭಾವ ಉಂಟಾಗಿದ್ದು, ಪಶುಗಳ ನಿರ್ವಹಣೆ, ಔಷಧೋಪಚಾರ ಹಾಗೂ ಮೇವು ಖರೀದಿಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಹೀಗಾಗಿ ಹಾಲು ಖರೀದಿ ದರ ಹೆಚ್ಚಿಸುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದರು.
ರೈತರ ಮನವಿಗೆ ಸ್ಪಂದಿಸಿದ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಂದಿನಿ ಟೋನ್ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 8 ರೂ. ಹೆಚ್ಚಿಸಲು ಹಾಗೂ ಹೆಚ್ಚುವರಿ ಮೊತ್ತದಲ್ಲಿ 7 ರೂ.ಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಿದೆ ಎಂದು ಕೆಎಂಎಫ್ ತಿಳಿಸಿದೆ.
ಜಿಡ್ಡಿನಾಂಶದ (ಫ್ಯಾಟ್) ಪ್ರಮಾಣದ ಆಧಾರದ ಮೇಲೆ ನಂದಿನಿಯ ವಿವಿಧ ಮಾದರಿಯ ಹಾಲು ಮತ್ತು ಮೊಸರಿನ ದರಗಳನ್ನು ಪರಿಷ್ಕರಿಸಲಾಗಿದೆ. ಮೊಸರಿನ 500 ಗ್ರಾಂ ಪೊಟ್ಟಣದ ದರ 28 ರೂ.ನಿಂದ 34 ರೂ.ಗೆ ಹಾಗೂ ಒಂದು ಕೆ.ಜಿ. ಪೊಟ್ಟಣದ ದರ 54 ರೂ.ನಿಂದ 68 ರೂ.ಗೆ ಹೆಚ್ಚಳವಾಗಿದೆ.
ಹಾಲು ಉತ್ಪಾದಕ ರೈತರ ಆದಾಯ ಸುಧಾರಿಸುವುದು, ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ದರ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಗ್ರಾಹಕರು ಎಂದಿನಂತೆ ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರಾಜ್ಯದ ಹೈನುಗಾರ ರೈತರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.

