ಬರಗಾಲದ ಬೇಗೆ

ಬರಗಾಲದ ಬೇಗೆ

ಬರಗಾಲದ ಬೇಗೆ

ಆಕಾಶದಲ್ಲಿ ಮೋಡಗಳಿಲ್ಲ, ಮಳೆಯ ಸದ್ದಿಲ್ಲ,

ಭೂಮಿಯ ಒಡಲಿನಲ್ಲಿ ಹಸಿರಿನ ಸುಳಿವಿಲ್ಲ.

ಒಮ್ಮೆ ಹಸಿರಿನಿಂದ ಕಂಗೊಳಿಸಿದ ಹೊಲಗಳು,

ಇಂದು ಬಿರುಕು ಬಿಟ್ಟ ಮಣ್ಣಿನ ಬಯಲುಗಳಾಗಿವೆ.

ಮಳೆಗಾಗಿ ಕಾಯುತಿದೆ ಭೂಮಿತಾಯಿಯ ಮಡಿಲು,

ನೀರಿಗಾಗಿ ಹಾತೊರೆಯುತಿದೆ ನದಿ, ಕೆರೆಗಳ ಒಡಲು.

ಒಣಗಿದ ಮರಗಳ ರೆಂಬೆಗಳು ಗಾಳಿಗೆ ತೂಗುತ್ತಿವೆ,

ಬಿಸಿಲಿನ ಬೇಗೆಯಲ್ಲಿ ಜೀವಗಳು ನರಳುತ್ತಿವೆ.

ಮುಗಿಲು ಕಪ್ಪಾಗಬಹುದೆಂದು ರೈತನು ಕಾಯುವನು,

ಮಳೆಯ ಹನಿಯ ಆಸೆಯಲ್ಲಿ ಆಕಾಶವ ನೋಡುವನು.

ಸಾಲ ಮಾಡಿ ಬಿತ್ತಿದ ಬೀಜ ಮೊಳಕೆಯೊಡೆಯಲಿಲ್ಲ,

ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗಲಿಲ್ಲ.

ರೈತನ ಬೆವರ ಹನಿಯು ಮಣ್ಣಿನಲ್ಲಿ ಬೆರೆತಿದೆ,

ಆದರೆ ಅವನ ಪರಿಶ್ರಮಕ್ಕೆ ಫಲವೇ ಸಿಗದಾಗಿದೆ.

ಹಸಿರು ಕನಸು ಕಂಡವನ ಬದುಕು ಬಾಡಿಹೋಗಿದೆ,

ಮಕ್ಕಳ ನಗುವಿನ ಹಿಂದೆ ಬಡತನದ ನೋವು ಅಡಗಿದೆ.

ಜಾನುವಾರುಗಳ ಕಣ್ಣಲ್ಲಿ ನೀರಿನ ಹಂಬಲ,

ಮೇವಿಲ್ಲದೆ ಅವುಗಳ ಬದುಕು ಕಂಗಾಲು.

ಹಳ್ಳಿಯ ಬಾವಿಗಳು ನೀರಿಲ್ಲದೆ ಬತ್ತಿಹೋಗಿವೆ,

ಜನರ ಬದುಕಿನ ಆಸೆಗಳು ಮಣ್ಣಾಗಿ ಹೋಗಿವೆ.

ಒಮ್ಮೆ ಜುಳುಜುಳು ಹರಿದ ನದಿಯ ನೀರಿಲ್ಲ,

ಒಮ್ಮೆ ತುಂಬಿ ತುಳುಕಿದ ಕೆರೆಯಲ್ಲಿ ಹನಿಯಿಲ್ಲ.

ಬಾವಿಯ ತಳದಲ್ಲಿ ನೀರಿನ ಗುರುತೂ ಕಾಣದು,

ಬಾಯಾರಿದ ಜೀವಗಳಿಗೆ ನೆಮ್ಮದಿಯೇ ದೊರೆಯದು.

ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆದ ಕಾಲವಿತ್ತು,

ಹಸಿರು ಹೊಲಗಳ ನಡುವೆ ಸಂತಸದಿಂದ ಬದುಕಿತ್ತು.

ಇಂದು ಮರಗಳನ್ನೆಲ್ಲ ಕಡಿದು ನಾಶ ಮಾಡಿದೆವು,

ಪ್ರಕೃತಿಯ ಸಂಪತ್ತನ್ನು ನಾವೇ ಬರಿದು ಮಾಡಿದೆವು.

ಮನುಷ್ಯನ ದುರಾಸೆಗೆ ಕಾಡುಗಳು ನಾಶವಾದವು,

ಮಳೆಯ ಮೋಡಗಳ ಆಗಮನವೂ ಕಡಿಮೆಯಾದವು.

ನದಿಗಳ ಒಡಲಿಗೆ ಕಸವನು ಸುರಿದೆವು,

ನೀರಿನ ಮಹತ್ವವ ಮರೆತು ಬದುಕಿದೆವು.

ಓ ಮಳೆಯೇ ಬಾ, ಧರೆಗೆ ಜೀವ ತುಂಬು,

ಒಣಗಿದ ಗಿಡಮರಗಳಿಗೆ ಮತ್ತೆ ಚಿಗುರು ಮೂಡಿಸು.

ರೈತನ ಹೊಲದಲ್ಲಿ ಹಸಿರಿನ ಹಬ್ಬ ಮಾಡು,

ಬಡವರ ಬದುಕಿನಲ್ಲಿ ಸಂತಸದ ಬೆಳಕು ಮೂಡಿಸು.

ಮಕ್ಕಳ ಮುಖದಲ್ಲಿ ನಗುವನ್ನು ಅರಳಿಸು,

ಜಾನುವಾರುಗಳ ಬಾಯಾರಿಕೆಯನ್ನು ನೀಗಿಸು.

ಕೆರೆ, ಕಟ್ಟೆ, ನದಿಗಳೆಲ್ಲ ತುಂಬಿ ಹರಿಯಲಿ,

ನಮ್ಮ ನಾಡಿನ ಭೂಮಿ ಮತ್ತೆ ಹಸಿರಾಗಲಿ.

ನೀರಿನ ಹನಿಯೊಂದು ಜೀವದ ಸಂಜೀವಿನಿ,

ಅದನ್ನು ಉಳಿಸುವುದೇ ನಮ್ಮೆಲ್ಲರ ಹೊಣೆಗಾರಿಕೆ.

ಮಳೆನೀರನ್ನು ಸಂಗ್ರಹಿಸಿ ಭೂಮಿಗೆ ಇಂಗಿಸೋಣ,

ಮರಗಳನ್ನು ನೆಟ್ಟು ಪ್ರಕೃತಿಯನ್ನು ಉಳಿಸೋಣ.

ಬರಗಾಲವೆಂಬ ಕಷ್ಟಕ್ಕೆ ಪರಿಹಾರ ಹುಡುಕೋಣ,

ನೀರಿನ ಪ್ರತಿಯೊಂದು ಹನಿಯನ್ನೂ ಜೋಪಾನ ಮಾಡೋಣ.

ಪ್ರಕೃತಿಯ ಮಡಿಲಲ್ಲಿ ಪ್ರೀತಿಯಿಂದ ಬದುಕೋಣ,

ಮುಂದಿನ ಪೀಳಿಗೆಗೆ ಹಸಿರು ನಾಡನ್ನು ನೀಡೋಣ.

ಮಳೆಯ ಹನಿಯಲಿ ರೈತನ ನಗು ಮೂಡಲಿ,

ಹಸಿರು ಹೊಲಗಳಲ್ಲಿ ಹೊಸ ಕನಸು ಅರಳಲಿ.

ಬರಗಾಲದ ಕತ್ತಲೆ ದೂರವಾಗಿ ಬೆಳಕು ಹರಡಲಿ,

ನಮ್ಮ ನಾಡು ಸದಾ ಸಮೃದ್ಧಿಯಿಂದ ಕಂಗೊಳಿಸಲಿ!

ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ