ನಾಡಿನ ಸೊಗಡನ್ನು ಬಿಂಬಿಸುವ ದೇಸಿ ಸಂಭ್ರಮ: ಶ್ರೀದೇವಿ ನಾಯಕ

ನಾಡಿನ ಸೊಗಡನ್ನು ಬಿಂಬಿಸುವ ದೇಸಿ ಸಂಭ್ರಮ: ಶ್ರೀದೇವಿ ನಾಯಕ

ನಾಡಿನ ಸೊಗಡನ್ನು ಬಿಂಬಿಸುವ ದೇಸಿ ಸಂಭ್ರಮ: ಶ್ರೀದೇವಿ ನಾಯಕ

ರಾಯಚೂರು, ನ. 10: ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಕಲೆಗಳು ಮರೆಯಾಗುತ್ತಿವೆ. ಮುಂದಿನ ಯುವ ಪೀಳಿಗೆಗೆ ನಾಡಿನ ಸೊಗಡನ್ನು ಪರಿಚಯಿಸುವ ದೇಸಿ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀದೇವಿ ಆರ್.ವಿ. ನಾಯಕ ಹೇಳಿದರು.

ನಗರದ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಆಯೋಜಿಸಿದ್ದ ‘ದೇಸಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವಕ-ಯುವತಿಯರು ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆ ಆಯೋಜಿಸಿರುವ ದೇಸಿ ಸಂಭ್ರಮದಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುವುದರ ಜತೆಗೆ ಇತರ ಸಂಘ-ಸಂಸ್ಥೆಗಳಿಗೂ ಪ್ರೇರಣೆಯಾಗಿವೆ ಎಂದರು.

ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಚಂಡೆ ಮೇಳ, ಪೂಜಾ ಕುಣಿತ, ಸುಗಮ ಸಂಗೀತ, ತೊಗಲುಗೊಂಬೆಯಾಟ, ಡೊಳ್ಳು ಕುಣಿತ ಹಾಗೂ ಬಯಲಾಟದಂತಹ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತವೆ. ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಕೆ. ಶಾಂತಪ್ಪ ಮಾತನಾಡಿ, ಕಲಾ ಸಂಕುಲ ಸಂಸ್ಥೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯ ಚಟುವಟಿಕೆಗಳಿಗೆ ನಮ್ಮ ಸಹಕಾರ ಮತ್ತು ಬೆಂಬಲ ಸದಾ ಇರಲಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವೀರಹನುಮಾನ ಹಾಗೂ ವೀರಣ್ಣ ರುದ್ರಾಕ್ಷಿ ಅವರನ್ನು ಗೌರವಿಸಲಾಯಿತು. ಚಿತ್ರನಟಿ ಹಾಗೂ ಸಮಾಜಸೇವಕಿ, ವಸಂತ ಲಕ್ಷ್ಮಿ ಫೌಂಡೇಶನ್ ಅಧ್ಯಕ್ಷೆ ಡಾ. ಪೂಜಾ ರಮೇಶ್ ಅವರಿಗೆ ‘ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಹನುಮಂತಪ್ಪ ಯಾದವ್ ಸೇರಿದಂತೆ 21 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ. ಅಸ್ಲಾಂ ಪಾಷಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್. ಶಿವಶಂಕರ್, ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಿ. ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ವಿರುಪಾಕ್ಷಿ ಕೊರವಿಹಾಳ ಹಾಗೂ ಪತ್ರಕರ್ತ ನರಸಿಂಗರಾವ್ ಸರ್ಕಿಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೊನ್ನಾವರದ ಚಂಡೆ ಮೇಳ, ಸಿಂಧನೂರಿನ ದುದ್ದುಪಡಿ ಕಲಾತಂಡದಿಂದ ಭರತನಾಟ್ಯ, ಹಟ್ಟಿ ಚಿನ್ನದ ಗಣಿಯ ವಿದುಷಿ ಶಿಲ್ಪಾ ಅವರ ತಂಡದಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಕೊಪ್ಪಳದ ಶರಣಯ್ಯ ಹಿರೇಮಠ ಅವರ ಸುಗಮ ಸಂಗೀತ ಹಾಗೂ ಸ್ಥಳೀಯ ಕಲಾವಿದರಾದ ಚಿರಂಜೀವಿ ಯಾದವ್ ಮತ್ತು ನರೇಂದ್ರ ಸುನಿಲ್ ಕುಮಾರ್ ಅವರಿಂದ ಭಾವಗೀತೆಗಳ ಗಾಯನ ಪ್ರೇಕ್ಷಕರ ಗಮನ ಸೆಳೆಯಿತು.

ತುಳಸಿ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಮಾರುತಿ ಬಡಿಗೇರ್ ಸ್ವಾಗತಿಸಿದರು.