ಬಡವರ ಮನೆಯಲ್ಲಿ ದೀಪಾವಳಿ ಆಚರಿಸಿದ ಚಿತ್ರನಟಿ ಡಾ. ಪೂಜಾ ರಮೇಶ್

ಬಡವರ ಮನೆಯಲ್ಲಿ ದೀಪಾವಳಿ ಆಚರಿಸಿದ ಚಿತ್ರನಟಿ ಡಾ. ಪೂಜಾ ರಮೇಶ್

ಬಡವರ ಮನೆಯಲ್ಲಿ ದೀಪಾವಳಿ ಆಚರಿಸಿದ ಚಿತ್ರನಟಿ ಡಾ. ಪೂಜಾ ರಮೇಶ್

ರಾಯಚೂರು : ಸಾಮಾನ್ಯವಾಗಿ ಹಬ್ಬದ ಸಂಭ್ರಮವನ್ನು ಐಷಾರಾಮಿ ಮನೆಗಳಲ್ಲಿ, ಅದ್ಧೂರಿ ಅಲಂಕಾರಗಳ ನಡುವೆ ಆಚರಿಸುವುದನ್ನು ಕಾಣುತ್ತೇವೆ. ಆದರೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯ ಐಷಾರಾಮಿ ಬದುಕನ್ನು ಬದಿಗಿಟ್ಟು ರಾಯಚೂರಿನ ಆಶ್ರಯ ಕಾಲೋನಿಯ ಬಡ ಕುಟುಂಬವೊಂದರ ಪುಟ್ಟ ಮನೆಯಲ್ಲಿ ವಾಸ್ತವ್ಯ ಮಾಡಿ, ಅವರೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಮೂಲಕ ಚಿತ್ರನಟಿ ಹಾಗೂ ಸಮಾಜಸೇವಕಿ ಡಾ. ಪೂಜಾ ರಮೇಶ್ ಮಾನವೀಯತೆ ಮತ್ತು ಸರಳತೆಯನ್ನು ಮೆರೆದಿದ್ದಾರೆ.

ರಾಯಚೂರು ನಗರದ ವಾರ್ಡ್ ನಂ. 28ರ ಹೊಸ ಆಶ್ರಯ ಕಾಲೋನಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸೈಕಲ್ ರಾಮಣ್ಣ ಅವರ ಮನೆಗೆ ಭೇಟಿ ನೀಡಿದ ಡಾ. ಪೂಜಾ ರಮೇಶ್, ಅವರ ಕುಟುಂಬದೊಂದಿಗೆ ದೀಪಾವಳಿ ಹಬ್ಬದ ಸಂಭ್ರಮ ಹಂಚಿಕೊಂಡರು. ರಾಮಣ್ಣ, ಅವರ ಪತ್ನಿ ಬಸ್ಸಮ್ಮ ಹಾಗೂ ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು, ಮಕ್ಕಳ ಜತೆ ಪಟಾಕಿ ಸಿಡಿಸಿ, ಮನೆಯ ಪುಟ್ಟ ಅಂಗಳದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಸಮಾಜದಲ್ಲಿ ಎಷ್ಟೇ ದೊಡ್ಡ ಸ್ಥಾನಮಾನ, ಹೆಸರು ಹಾಗೂ ಜನಪ್ರಿಯತೆ ಗಳಿಸಿದರೂ ಸಾಮಾನ್ಯ ಜನರೊಂದಿಗೆ ಬೆರೆಯುವ ಗುಣವೇ ವ್ಯಕ್ತಿಯ ನಿಜವಾದ ದೊಡ್ಡತನವನ್ನು ತೋರಿಸುತ್ತದೆ ಎಂಬುದಕ್ಕೆ ಡಾ. ಪೂಜಾ ರಮೇಶ್ ಅವರ ಈ ನಡೆ ಸಾಕ್ಷಿಯಾಯಿತು. ಯಾವುದೇ ಆಡಂಬರ, ಅಹಂಕಾರವಿಲ್ಲದೆ ಬಡ ಕುಟುಂಬದ ಮನೆಗೆ ತೆರಳಿ ಅವರೊಂದಿಗೆ ಸಮಯ ಕಳೆದ ಅವರು, ಆ ಕುಟುಂಬದ ಸದಸ್ಯರಲ್ಲೊಬ್ಬರಂತೆ ಬೆರೆತು ಆತ್ಮೀಯತೆ ತೋರಿದರು. ರಾಮಣ್ಣ ಮತ್ತು ಬಸ್ಸಮ್ಮ ತಮ್ಮ ಮನೆಯ ಪರಿಸ್ಥಿತಿಯ ನಡುವೆಯೂ ಪ್ರೀತಿಯಿಂದ ನಟಿಯನ್ನು ಸ್ವಾಗತಿಸಿ, ಮನೆಯಲ್ಲಿಯೇ ಸಿದ್ಧಪಡಿಸಿದ ಊಟವನ್ನು ಪ್ರೀತಿಯಿಂದ ಉಣಬಡಿಸಿದರು. ಅವರ ಪ್ರೀತಿಯ ಆತಿಥ್ಯವನ್ನು ಸ್ವೀಕರಿಸಿದ ಡಾ. ಪೂಜಾ ರಮೇಶ್, ಆಶ್ರಯ ಕಾಲೋನಿಯ ಪುಟ್ಟ ಟಿನ್‌ಶೆಡ್ ಮನೆಯಲ್ಲಿ ರಾತ್ರಿ ವಾಸ್ತವ್ಯ ಮಾಡುವ ಮೂಲಕ ತಮ್ಮ ಸರಳ ವ್ಯಕ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಸಾಮಾನ್ಯವಾಗಿ ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ಕಲಾವಿದರು ಐಷಾರಾಮಿ ಹೋಟೆಲ್‌ಗಳು, ವಿಶೇಷ ಆತಿಥ್ಯಕ್ಕೆ ಆದ್ಯತೆ ನೀಡುವ ಸಂದರ್ಭದಲ್ಲಿ, ಬಡ ಕುಟುಂಬವೊಂದರ ಪುಟ್ಟ ಮನೆಯಲ್ಲಿ ಉಳಿದುಕೊಂಡು ಅವರೊಂದಿಗೆ ಹಬ್ಬ ಆಚರಿಸಿರುವುದು ವಿಶೇಷ ಗಮನ ಸೆಳೆಯಿತು. ಹಬ್ಬವೆಂದರೆ ಕೇವಲ ಹೊಸ ಬಟ್ಟೆ, ಸಿಹಿ ತಿಂಡಿ, ಪಟಾಕಿ ಮತ್ತು ಬೆಳಕಿನ ಸಂಭ್ರಮವಷ್ಟೇ ಅಲ್ಲ; ನಮ್ಮ ಸುತ್ತಮುತ್ತಲಿನವರೊಂದಿಗೆ ಸಂತೋಷ ಹಂಚಿಕೊಳ್ಳುವುದು, ಸಂಕಷ್ಟದಲ್ಲಿರುವವರ ಮುಖದಲ್ಲಿ ನಗು ಮೂಡಿಸುವುದೂ ಹಬ್ಬದ ನಿಜವಾದ ಅರ್ಥ ಎಂಬ ಸಂದೇಶವನ್ನು ಅವರು ತಮ್ಮ ನಡೆ ಮೂಲಕ ಸಾರಿದರು.

ರಾಯಚೂರು ಜಿಲ್ಲೆಗೆ ಈ ಮೊದಲು ಹಲವು ಬಂದಿದ್ದಾರೆ ಆದರೆ ಈ ಬಡಾವಣೆಗೆ ಮೊದಲ ಬಾರಿಗೆ ಆಗಮಿಸಿದ ಡಾ. ಪೂಜಾ ರಮೇಶ್ ಅವರನ್ನು ಎಲ್‌ಬಿಎಸ್ ನಗರದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಸರಳ ನಡೆ, ಮಾನವೀಯ ಗುಣ ಮತ್ತು ಸಮಾಜಸೇವಾ ಮನೋಭಾವಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಬಡ ಕುಟುಂಬದ ಮನೆಯಲ್ಲಿ ದೀಪಾವಳಿ ಆಚರಿಸುವ ಮೂಲಕ ಆ ಮನೆಯ ಮಕ್ಕಳಿಗೆ ವಿಶೇಷ ಸಂತೋಷ ನೀಡಿದ್ದಲ್ಲದೆ, ಕುಟುಂಬದ ಸದಸ್ಯರಿಗೆ ಮರೆಯಲಾಗದ ಹಬ್ಬದ ಅನುಭವವನ್ನು ಉಡುಗೊರೆಯಾಗಿ ನೀಡಿದರು.

ಡಾ. ಪೂಜಾ ರಮೇಶ್ ಅವರು ಕೇವಲ ಚಿತ್ರನಟಿಯಾಗಿ ಗುರುತಿಸಿಕೊಳ್ಳದೆ, ಸಮಾಜದ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಸಮಾಜಸೇವಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿದ್ದು, ಮಹಿಳೆಯರು ಹಾಗೂ ಸಂಕಷ್ಟದಲ್ಲಿರುವ ಮಕ್ಕಳ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣದಿಂದ ವಂಚಿತರಾಗಬಾರದು, ಮಕ್ಕಳಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯಬೇಕು ಎಂಬ ಆಶಯದೊಂದಿಗೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು ರಾಯಚೂರು ನಗರದಲ್ಲಿ ಚಿಂದಿ ಆಯುವ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸಮಾಜದ ಮುಂದೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಚಿಂದಿ ಸ್ಟಾರ್ಸ್’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದರು. ಸಾಮಾನ್ಯವಾಗಿ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಮಕ್ಕಳಿಗೆ ದೊಡ್ಡ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿಯೂ ಪ್ರತಿಭೆ, ಕನಸು ಮತ್ತು ಸಾಧಿಸುವ ಛಲವಿದೆ ಎಂಬುದನ್ನು ರಾಜ್ಯದ ಗಮನಕ್ಕೆ ತಂದಿದ್ದರು. ಈ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು.

ಕಲಾವಿದೆಯಾಗಿ ಜನರ ಮನರಂಜಿಸುವುದರ ಜತೆಗೆ ಸಮಾಜದ ನೋವು, ಸಂಕಷ್ಟಗಳಿಗೆ ಸ್ಪಂದಿಸುವುದು, ಬಡವರೊಂದಿಗೆ ಸಂತೋಷ ಹಂಚಿಕೊಳ್ಳುವುದು ಮತ್ತು ಅವಕಾಶ ವಂಚಿತ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ನಿಜವಾದ ಸಮಾಜಸೇವೆಯಾಗಿದೆ. ಡಾ. ಪೂಜಾ ರಮೇಶ್ ಅವರ ಇಂತಹ ಕಾರ್ಯಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜತೆಗೆ ಇತರರಿಗೂ ಮಾದರಿಯಾಗಿವೆ. ದೀಪಾವಳಿಯ ಬೆಳಕನ್ನು ಕೇವಲ ತಮ್ಮ ಮನೆಗಳಿಗೆ ಸೀಮಿತಗೊಳಿಸದೆ, ಬಡವರ ಬದುಕಿನಲ್ಲಿಯೂ ಸಂತೋಷದ ಬೆಳಕು ಮೂಡಿಸಿದ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇಂತಹ ಸಮಾಜಮುಖಿ ಕಲಾವಿದರು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ಐಷಾರಾಮಿ ಬದುಕಿನ ಆಡಂಬರ ಬದಿಗಿಟ್ಟು ಬಡ ಕುಟುಂಬದೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡ ಸಮಾಜಸೇವಕಿ, ಮಾನವೀಯತೆಗೆ ಮತ್ತೊಂದು ಹೆಸರು ಪೂಜಾ ರಮೇಶ್

✍️ ತುಳಸಿ ಯಾದವ್