ನಿವೃತ್ತ ಉಪನ್ಯಾಸಕ ಸಿದ್ರಾಮಪ್ಪ ಎಸ್. ಅಂಡಗಿ ನಿಧನ

ನಿವೃತ್ತ ಉಪನ್ಯಾಸಕ ಸಿದ್ರಾಮಪ್ಪ ಎಸ್. ಅಂಡಗಿ ನಿಧನ

ನಿವೃತ್ತ ಉಪನ್ಯಾಸಕ ಸಿದ್ರಾಮಪ್ಪ ಎಸ್. ಅಂಡಗಿ ನಿಧನ

ಕಲಬುರಗಿ: ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ನಿವೃತ್ತ ಉಪನ್ಯಾಸಕ ಸಿದ್ರಾಮಪ್ಪ ಎಸ್. ಅಂಡಗಿ (65) ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಮೃತರು ತಾಯಿ, ಸಹೋದರ, ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ದಿನಾಂಕ 11-11-2026ರಂದು ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ಕಲಬುರಗಿ ನಗರದ ಜಯನಗರದಲ್ಲಿ ಎರಡು ಗಂಟೆಗಳ ಕಾಲ ವ್ಯವಸ್ಥೆ ಮಾಡಲಾಗಿದೆ. ಅದೇ ದಿನ ಸಂಜೆ 4:30ಕ್ಕೆ ಟೆಂಗಳಿ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಶಿವರಾಜ್ ಅಂಡಗಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಕರ್ನಾಟಕ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಸಿದ್ರಾಮಪ್ಪ ಅಂಡಗಿ ಅವರು, ರಾಷ್ಟ್ರೀಯ ಸೇವಾ ಯೋಜನೆ (NSS) ಶಿಬಿರಗಳ ಮೂಲಕ ನೂರಾರು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಹಾಗೂ ವ್ಯಾವಹಾರಿಕ ಜ್ಞಾನ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ವಿದ್ಯಾರ್ಥಿಗಳನ್ನು ದೇಶದ ವಿವಿಧ ಭಾಗಗಳಿಗೆ ಪ್ರವಾಸಕ್ಕೆ ಕರೆದೊಯ್ದು, ಪ್ರವಾಸದ ಖರ್ಚು-ವೆಚ್ಚಗಳ ಲೆಕ್ಕಪತ್ರವನ್ನು ಅವರಿಂದಲೇ ನಿರ್ವಹಿಸುವ ಮೂಲಕ ಹಣಕಾಸಿನ ನಿರ್ವಹಣೆ ಮತ್ತು ಲೆಕ್ಕಪತ್ರದ ಕುರಿತು ಪ್ರಾಯೋಗಿಕ ತಿಳುವಳಿಕೆ ಮೂಡಿಸುತ್ತಿದ್ದರು.

ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ ಹಾಗೂ ಜೀವನಾನುಭವ ಬೆಳೆಸಲು ಶ್ರಮಿಸಿದ ಅವರ ಸೇವೆ ಸ್ಮರಣೀಯವಾಗಿದೆ. ಅವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಟೆಂಗಳಿ ಗ್ರಾಮದ ಜನತೆಗೆ ತುಂಬಲಾರದ ನಷ್ಟ ಉಂಟಾಗಿದೆ.